ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ ಪಂದ್ಯದಲ್ಲಿ ಭಾರತ (India vs Sri Lanka) ತಂಡ ಇನಿಂಗ್ಸ್ ಹಾಗೂ 222 ರನ್‌ಗಳಿಂದ ಭರ್ಜರಿ ಗೆಲುವು ಪಡೆದುಕೊಂಡಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಭಾರತ ತಂಡ ತನ್ನ ಗೆಲುವಿನ ಓಟ ಮುಂದುವರೆಸಿದೆ. ಅಲ್ಲದೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ 100ನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಮೊಹಾಲಿ ಟೆಸ್ಟ್ ಅನ್ನು ಗೆಲ್ಲಬೇಕೆಂದು ಲೆಕ್ಕಾಚಾರಗಳನ್ನು ಹಾಕಿದಂತೆ ಶ್ರೀಲಂಕಾ ತಂಡವನ್ನು ಸೋಲಿನ ದವಡೆಗೆ ದೂಡುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಇನಿಂಗ್ಸ್ ಮತ್ತು ಬೃಹತ್ ಅಂತರದಿಂದ ಗೆದ್ದ ದಾಖಲೆ ಬರೆದರು. ಶ್ರೀಲಂಕಾ ಪಾಲಿಗೆ ಇದು ಮೂರನೇ ಅತೀ ದೊಡ್ಡ ಅಂತರದ ಸೋಲೆನಿಸಿಕೊಂಡಿತು.
ಮೊದಲ ದಿನದಾಟ:
ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಆಡಿತಷ್ಟೆ. ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ದೊಡ್ಡ ಮಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಮಯಾಂಕ್ ಅಗರ್ವಾಲ್ 49 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 33 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 100ನೇ ಟೆಸ್ಟ್ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಮೂರಂಕಿ ತಲುಪದೆ 76 ಎಸೆತಗಳಲ್ಲಿ 45 ರನ್ ಕಲೆಹಾಕುವ ಮೂಲಕ ತನ್ನ ಇನ್ನಿಂಗ್ಸ್ ಮುಗಿಸಿದರು. ಮೂರನೇ ವಿಕೆಟ್‌ಗೆ ಹನುಮಾ ವಿಹಾರಿ ಜೊತೆಗೂಡಿ 90 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಕೊಹ್ಲಿ ಔಟ್ ಆಗುವ ಮೂಲಕ ಬೇರ್ಪಟ್ಟಿತು. ಇದೇ ಸಂದರ್ಭದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್ ಗಡಿ ಮುಟ್ಟಿದ್ದಲ್ಲದೆ 900 ಬೌಂಡರಿ ಸಿಡಿಸಿದ ಸಾಧನೆ ಮಾಡಿದರು.
ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಸ್ಥಾನದಲ್ಲಿ ಆಡಿದ ವಿಹಾರಿ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. 128 ಎಸೆತಗಳನ್ನ ಎದುರಿಸಿದ ವಿಹಾರಿ 5 ಬೌಂಡರಿ ಸಹಿತ 58 ರನ್ ಕಲೆಹಾಕಿದರು. ನಂತರ ಶುರುವಾಗಿದ್ದು ರಿಷಭ್ ಪಂತ್ ಸ್ಫೋಟಕ ಆಟ. ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ಪಂತ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಲಂಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಂತ್ 73 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿ ಮತ್ತಷ್ಟು ಆಕ್ರಮಣಕಾರಿ ಆಟವಾಡಲಾರಂಭಿಸಿದರು. ಅದರಲ್ಲೂ ಲಸಿತ್ ಎಂಬುಲ್ಡೆನಿಯಾ ಬೌಲಿಂಗ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ ಪಂತ್ ಒಂದೇ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 22 ರನ್ ಚಚ್ಚಿದರು. ಅಂತಿಮವಾಗಿ ರಿಷಭ್ ಪಂತ್ 97 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 96 ರನ್ ಬಾರಿಸಿ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ರವೀಂದ್ರ ಜಡೇಜಾ, ಪಂತ್ಗೆ ಉತ್ತಮ ಸಾಥ್ ನೀಡಿದರು. 6ನೇ ವಿಕೆಟ್‌ಗೆ ಈ ಜೋಡಿ 104 ರನ್‌ಗಳ ಜೊತೆಯಾಟ ನಿಭಾಯಿಸಿತು. ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ (10) ಮತ್ತು ರವೀಂದ್ರ ಜಡೇಜಾ (45) ಜೊತೆಯಾಗಿ ದಿನದಾಟದಂತ್ಯಗೊಳಿಸಿದ್ದರು.
ಎರಡನೇ ದಿನದಾಟ:
ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಭಾರತ ಪರ ಜಡೇಜಾ ಮತ್ತು ಅಶ್ವಿನ್ ಏಳನೇ ವಿಕೆಟ್‌ಗೆ 130 ರನ್‌ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಸ್ಕೋರನ್ನು 500ರ ಗಡಿಯತ್ತ ತಲುಪಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಊಟದ ವಿರಾಮಕ್ಕೆ ಕೆಲ ಸಮಯದ ಹಿಂದೆ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ 82 ಎಸೆತಗಳಲ್ಲಿ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಅಶ್ವಿನ್ ಡಿಕ್ವೆಲ್ಲಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ನಂತರ ತಮ್ಮ ಅಮೋಘ ಇನ್ನಿಂಗ್ಸ್ ಮುಂದುವರಿಸಿದ ಜಡೇಜಾ ಡಿಕ್ಲೇರ್ ಘೋಷಿಸುವ ಮೊದಲು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು. ಜಡೇಜಾ ಈ ಅಮೋಘ ಆಟದೊಂದಿಗೆ ಭಾರತ ಮಾಜಿ ನಾಯಕ ಕಪಿಲ್‌ದೇವ್‌ರ 36 ವರ್ಷಗಳ ಹಳೆಯ ದಾಖಲೆ ಕೂಡ ನುಚ್ಚು ನೂರಾದಾವು. 9ನೇ ವಿಕೆಟ್‌ಗೆ ಜಡೇಜಾಗೆ ಸಾಥ್ ನೀಡಿದ ಮೊಹಮ್ಮದ್ ಶಮಿ ಅಜೇಯ 20 ರನ್ ಕಲೆಹಾಕಿದರು. ಈ ಮೂಲಕ 9ನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವೂ ಮೂಡಿಬಂತು. ಅಂತಿಮವಾಗಿ ನಾಯಕ ರೋಹಿತ್ ಶರ್ಮಾ ಭಾರತ ತಂಡ 129.2 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದರು.
ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 43 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಆ ಮೂಲಕ ಇನ್ನೂ 466 ರನ್‌ಗಳ ಹಿನ್ನಡೆಯಲ್ಲಿತ್ತು. ದಿಮುತ್ ಕರುಣಾರತ್ನೆ(28), ಲಹಿರು ತಿರಿಮಾನ್ನೆ(17), ಏಂಜೆಲೊ ಮ್ಯಾಥ್ಯೂಸ್(22) ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಆದರೆ ಜಸ್‌ಪ್ರಿತ್ ಅವರಿಂದ ಒಂದು ಜೀವದಾನ ಪಡೆದ ಪತುಮ್ ನಿಸಂಕ ಅವರು ಅಜೇಯ 26 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಚರಿತ ಅಸಲಂಕಾ ಇದ್ದರು.
ಮೂರನೇ ದಿನದಾಟ:
ಮೂರನೇ ದಿನದಾಟದಲ್ಲಿ ಕೂಡ ಶ್ರೀಲಂಕಾ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 174 ರನ್ನಿಗೆ ಆಲೌಟ್ ಆಗಿರುವ ಲಂಕಾ ಫಾಲೋ ಆನ್‌ಗೆ ಗುರಿಯಾಗಿತ್ತು. ಅದರಂತೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಂಕಾದ ಚಿತ್ರಣ ಬದಲಾಗಲಿಲ್ಲ. ಅಲ್ಲದೆ ಕೇವಲ 178 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹೀನಾಯ ಸೋಲಿಗೆ ಶರಣಾಯಿತು.
WTC Points Table: ಲಂಕಾ ದಹನದ ನಂತರವೂ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಲೇ ಇಲ್ಲ ಭಾರತ!