Virat Kohli: ಕೊಹ್ಲಿಯ ನಾಯಕತ್ವಕ್ಕೆ ಕುತ್ತು: ಟೂರ್ನಿ ಮಧ್ಯದಲ್ಲೇ ಹೊಸ ನಾಯಕನ ಆಯ್ಕೆ?

| Updated By: ಝಾಹಿರ್ ಯೂಸುಫ್

Updated on: Sep 22, 2021 | 2:27 PM

RCB: ದ್ವಿತಿಯಾರ್ಧದಲ್ಲಿ ಕೆಕೆಆರ್​​ ವಿರುದ್ದ ಸೋಲಿನೊಂದಿಗೆ ಆರ್​ಸಿಬಿ ಅಭಿಯಾನ ಆರಂಭಿಸಿದ್ದು, ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಆಡಲಿದೆ.

Virat Kohli: ಕೊಹ್ಲಿಯ ನಾಯಕತ್ವಕ್ಕೆ ಕುತ್ತು: ಟೂರ್ನಿ ಮಧ್ಯದಲ್ಲೇ ಹೊಸ ನಾಯಕನ ಆಯ್ಕೆ?
Virat kohli
Follow us on

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಇತ್ತೀಚೆಗಷ್ಟೇ ತಮ್ಮ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಈ ಘೋಷಣೆ ಬೆನ್ನಲ್ಲೇ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ (KKR)​ ವಿರುದ್ದದ ಪಂದ್ಯದಲ್ಲಿ ಆರ್​ಸಿಬಿ (Rcb) ಹೀನಾಯವಾಗಿ ಸೋಲನುಭವಿಸಿದೆ. ಇತ್ತ ಮುಂದಿನ ಸೀಸನ್​ನಲ್ಲಿ ಕೇವಲ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಕೊಹ್ಲಿಯ ಈ ದಿಢೀರ್ ರಾಜಿನಾಮೆ ಘೋಷಣೆಯಿಂದ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅನೇಕ ಮಾಜಿ ಕ್ರಿಕೆಟರುಗಳು ಅಭಿಪ್ರಾಯಪಟ್ಟಿದ್ದರು. ಈ ಅಭಿಪ್ರಾಯ ನಿಜವಾಗಲಿದೆ ಎಂಬಂತೆ ದ್ವಿತಿಯಾರ್ಧದದ ಮೊದಲ ಪಂದ್ಯದಲ್ಲೇ ಆರ್​ಸಿಬಿ ಮುಗ್ಗರಿಸಿದೆ. ಇನ್ನು ಮೊದಲಾರ್ಧದಲ್ಲಿ ಉತ್ತಮವಾಗಿ ಆಡಿದ್ದ ಆರ್​ಸಿಬಿ ದ್ವಿತಿಯಾರ್ಧದಲ್ಲಿ ಹೀನಾಯ ಪ್ರದರ್ಶನ ನೀಡಿರುವುದು ಆರ್​ಸಿಬಿ ಫ್ರಾಂಚೈಸಿಯ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಟೂರ್ನಿಯ ಮಧ್ಯೆ ಭಾಗದಲ್ಲೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಸಲಿದೆ ಎಂಬ ಗಾಢವಾದ ಸುದ್ದಿಯೊಂದು ಹರಿದಾಡುತ್ತಿದೆ.

ಆರ್​ಸಿಬಿ ಫ್ರಾಂಚೈಸಿ ಕೊಹ್ಲಿಯನ್ನು ಟೂರ್ನಿಯ ಮಧ್ಯದಲ್ಲೇ ಕೈ ಬಿಡುವ ಸಾಧ್ಯತೆಯಿದೆ ಎಂದು ಮಾಜಿ ಕ್ರಿಕೆಟಿಗರೊಬ್ಬರು ಮಾಹಿತಿ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಈ ಬಗ್ಗೆ ಚರ್ಚಿಸಿದ್ದು, ಅದರಂತೆ ಕೊಹ್ಲಿಯನ್ನು ಕೆಳಗಿಳಿಸಿ ಉಳಿದ ಪಂದ್ಯಗಳಿಗೆ ಮತ್ತೋರ್ವ ನಾಯಕನನ್ನು ನೇಮಿಸಲಿದೆ. ಸದ್ಯ ಕೊಹ್ಲಿ ಕೂಡ ಕಳಪೆ ಫಾರ್ಮ್​ನಲ್ಲಿದ್ದು, ಹಾಗೆಯೇ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ನಾಯಕತ್ವವನ್ನು ತ್ಯಜಿಸಲು ಈಗಾಗಲೇ ನಿರ್ಧರಿಸಿದ್ದಾರೆ. ಹೀಗಾಗಿ ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕೊಹ್ಲಿ ಕೂಡ ಸಮ್ಮತಿ ಸೂಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹೆಸರು ಹೇಳಲಿಚ್ಛಿಸದ ಮಾಜಿ ಕ್ರಿಕೆಟಿಗ, ಐಪಿಎಲ್​ನಲ್ಲಿ ಇಂತಹ ಬದಲಾವಣೆ ಹೊಸದೇನಲ್ಲ. ಈ ಹಿಂದೆ ಕೂಡ ಹಲವು ತಂಡಗಳು ಅರ್ಧದಲ್ಲೇ ನಾಯಕನನ್ನು ಬದಲಿಸಿದೆ. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬದಲು ಇಯಾನ್ ಮೊರ್ಗನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಅಷ್ಟೇ ಅಲ್ಲದೆ ಐಪಿಎಲ್​ನ ಮೊದಲಾರ್ಧದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿ, ಕೇನ್ ವಿಲಿಯಮ್ಸನ್​ಗೆ ನಾಯಕತ್ವ ನೀಡಲಾಗಿತ್ತು. ಇದೇ ರೀತಿಯಲ್ಲೇ ಆರ್​ಸಿಬಿ ತಂಡದ ಉಳಿದ 6 ಪಂದ್ಯಗಳ ನಡುವೆ ತಂಡದ ನಾಯಕತ್ವ ಬದಲಾವಣೆ ಆಗಲಿದೆ ಎಂದು ಮಾಜಿ ಕ್ರಿಕೆಟಿಗ ಮಾಹಿತಿ ಬಿಚ್ಚಿಟ್ಟಿದ್ದಾರೆ.

ದ್ವಿತಿಯಾರ್ಧದಲ್ಲಿ ಕೆಕೆಆರ್​​ ವಿರುದ್ದ ಸೋಲಿನೊಂದಿಗೆ ಆರ್​ಸಿಬಿ ಅಭಿಯಾನ ಆರಂಭಿಸಿದ್ದು, ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ದ ನಡೆಯಲಿರುವ ಈ ಪಂದ್ಯದ ವೇಳೆ ಅಥವಾ ಆ ಪಂದ್ಯದ ಫಲಿತಾಂಶದ ಬಳಿಕ ಆರ್​ಸಿಬಿ ತಂಡದ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಆರ್​ಸಿಬಿ ಫ್ರಾಂಚೈಸಿ ಇಂತಹ ನಿರ್ಧಾರ ಕೈಗೊಂಡರೆ, ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗುವುದಂತು ಸತ್ಯ.

ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(RCB could remove Virat Kohli as captain mid-way through UAE leg)