RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು!

Jordan Cox: ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜೋರ್ಡನ್ ಕಾಕ್ಸ್ ಇದೀಗ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆರ್​ಸಿಬಿ ಪರ 16 ಪಂದ್ಯಗಳಲ್ಲೂ ಬೆಂಚ್ ಕಾದಿದ್ದ ಕಾಕ್ಸ್ ಟಿ20 ಬ್ಲಾಸ್ಟ್​ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾಗಿದ್ದಾರೆ.

RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು!
Jordan Cox
Image Credit source: wisden

Updated on: Jun 10, 2026 | 10:24 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯ 52ನೇ ಪಂದ್ಯದಲ್ಲಿ ಎಸೆಕ್ಸ್ ತಂಡವು ರೋಚಕ ಜಯ ಸಾಧಿಸಿದೆ. ಚೆಲ್ಮ್ಸ್‌ಫೋರ್ಡ್​ನ ಕೌಂಟ್ರಿ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಎಸೆಕ್ಸ್ ಹಾಗು ಕೆಂಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪೌಲ್ ವಾಲ್ಟರ್ 17 ರನ್​ಗಳಿಸಿ ಔಟಾದರೆ, ಮೈಕೆಲ್ ಪೆಪ್ಪೆರ್ 6 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದರು. ಈ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ಎದುರಿಸಿದ್ದು ಬರೋಬ್ಬರಿ 31 ಎಸೆತಗಳು. ಈ ಮೂವತ್ತೊಂದು ಎಸೆತಗಳಲ್ಲಿ ಕಾಕ್ಸ್ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಕೇವಲ 40 ರನ್​ಗಳಿಸಲಷ್ಟೇ ಶಕ್ತರಾದರು.

ಒಂದೆಡೆ ಕಾಕ್ಸ್ ಅವರ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಎಸೆಕ್ಸ್ ತಂಡದ ರನ್​ ಗತಿ ಕೂಡ ಕುಂಠಿತವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಚಾರ್ಲಿ ಅಲ್ಲಿಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ರನ್ ವೇಗ ಹೆಚ್ಚಿಸಿದರು.

  • 47 ಎಸೆತಗಳನ್ನು ಎದುರಿಸಿದ ಚಾರ್ಲಿ ಅಲ್ಲಿಸನ್ 6 ಭರ್ಜರಿ ಸಿಕ್ಸ್​ ಹಾಗೂ 3 ಫೋರ್​ಗಳೊಂದಿಗೆ 74 ರನ್ ಬಾರಿಸಿದರು.
  • ಚಾರ್ಲಿ ಅಲ್ಲಿಸನ್​ಗೆ ಉತ್ತಮ ಸಾಥ್ ನೀಡಿದ ವಿಯಾನ್ ಮುಲ್ಡರ್ 11 ಎಸೆತಗಳಲ್ಲಿ 29 ರನ್​ಗಳ ಕೊಡುಗೆ ನೀಡಿದರು.

ಚಾರ್ಲಿ ಅಲ್ಲಿಸನ್ ಅವರ ಸಿಡಿಲಬ್ಬರ ಹಾಗೂ ವಿಯಾನ್ ಮುಲ್ಡರ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಎಸೆಕ್ಸ್ ತಂಡವು 20 ಓವರ್​ಗಳಲ್ಲಿ 187 ರನ್ ಕಲೆಹಾಕಿತು.

188 ರನ್​ಗಳ ಗುರಿ:

ಈ ಗುರಿ ಬೆನ್ನತ್ತಿದ ಕೆಂಟ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಚಾರ್ಲಿ ಬೆನ್ನೆಟ್ ಯಶಸ್ವಿಯಾದರು. ಆರಂಭಿಕ ದಾಂಡಿಗರಾದ ಹ್ಯಾರಿ ಫಿಂಚ್ (13) ಹಾಗೂ ಬೆಲ್ ಡ್ರಾಮೊಂಡ್ (2) ವಿಕೆಟ್ ಉರುಳಿಸುವ ಮೂಲಕ ಚಾರ್ಲಿ ಬೆನ್ನೆಟ್ ಪವರ್​ಪ್ಲೇನಲ್ಲೇ 2 ಯಶಸ್ಸು ತಂದು ಕೊಟ್ಟರು.

ಆದರೆ ಬಳಿಕ ಬಂದ ನಾಯಕ ಸ್ಯಾಮ್ ಬಿಲ್ಲಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 38 ಎಸೆತಗಳನ್ನು ಎದುರಿಸಿದ ಬಿಲ್ಲಿಂಗ್ಸ್​ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 68 ರನ್ ಬಾರಿಸಿದರು. ಇದಾಗ್ಯೂ ಕೆಂಟ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 17 ರನ್​ಗಳ ಅವಶ್ಯಕತೆಯಿತ್ತು.

ಅಂತಿಮ ಓವರ್​ನಲ್ಲಿ ಜೇಕ್ ಲಿನ್ನೊಟ್ ಹಾಗೂ ಫ್ರೆಡ್ ಕ್ಲಾಸೆನ್ ಜೊತೆಗೂಡಿ 4, 4, 0, 1, 1, 4 ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಎಸೆಕ್ಸ್ ತಂಡವು 3 ರನ್​ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

 

 

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us