AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs KKR, IPL 2021 Eliminator: ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಶಾಕ್: ಇಬ್ಬರು ಸ್ಟಾರ್ ಪ್ಲೇಯರ್ಸ್ ಟೂರ್ನಿಯಿಂದ ಔಟ್

T20 World Cup: ಐಸಿಸಿ ಟಿ-20 ವಿಶ್ವಕಪ್ ಕ್ಯಾಂಪ್​ಗಾಗಿ ಆರ್​ಸಿಬಿ ತಂಡದ ವಾನಿಂದು ಹಸರಂಗ ಮತ್ತು ದುಷ್ಮಾಂತ ಚಮೀರಾ ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಐಪಿಎಲ್ 2021 ರಿಂದ ಹೊರ ನಡೆಯಲಿದ್ದಾರೆ.

RCB vs KKR, IPL 2021 Eliminator: ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಶಾಕ್: ಇಬ್ಬರು ಸ್ಟಾರ್ ಪ್ಲೇಯರ್ಸ್ ಟೂರ್ನಿಯಿಂದ ಔಟ್
Virat Kohli RCB vs KKR IPL 2021
TV9 Web
| Edited By: |

Updated on: Oct 11, 2021 | 10:12 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ (IPL ) ಕಷ್ಟಪಟ್ಟು ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಇದೀಗ ಅಗ್ನಿ ಪರೀಕ್ಷೆ ಎದುರಾಗಿದೆ. ಇಂದು ವಿರಾಟ್ ಕೊಹ್ಲಿ (Virat Kohli) ಪಡೆ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ವಿರುದ್ಧ ಎಲಿನಿಮೇಟರ್ ಪಂದ್ಯವನ್ನು ಆಡಲಿದ್ದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಇದರಲ್ಲಿ ಗೆದ್ದ ತಂಡ ಎರಡನೇ ಕ್ವಾಲಿಫೈಯರ್​ನಲ್ಲಿ (Qualifier 2) ಚೆನ್ನೈ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ (DC vs CSK) ತಂಡವನ್ನು ಎದುರಿಸಲಿದೆ. ಸೋತ ತಂಡ ಟೂರ್ನಿಯಿಂದ ಸಂಪೂರ್ಣ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ. ಅದರಲ್ಲೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿಗೆ (RCB) ಇದು ಮಹತ್ವದ್ದಾಗಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರು ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ.

ಹೌದು, ಪ್ರಮುಖ ಹಂತದಲ್ಲೇ ಆರ್​ಸಿಬಿಗೆ ಸಂಕಷ್ಟ ಉಂಟಾಗಿದೆ. ತಂಡದ ಪ್ರಮುಖ ಶ್ರೀಲಂಕಾ ಆಟಗಾರರಾದ ವಾನಿಂದು ಹಸರಂಗ ಮತ್ತು ದುಷ್ಮಾಂತ ಚಮೀರ ಐಪಿಎಲ್​ನಿಂದ ಹೊರ ನಡೆಯುವ ಸಂದರ್ಭ ಉಂಟಾಗಿದೆ. ಐಸಿಸಿ ಟಿ-20 ವಿಶ್ವಕಪ್ ಕ್ಯಾಂಪ್​ಗಾಗಿ ಇವರಿಬ್ಬರು ತಮ್ಮ ರಾಷ್ಟ್ರೀಯ ತಂಡ ಸೇರಲಿದ್ದಾರೆ.

“ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಾನಿಂದು ಹಸರಂಗ ಮತ್ತು ದುಷ್ಮಾಂತ ಚಮೀರ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಕ್ಟೋಬರ್ 10 ರ ಒಳಗೆ ಕ್ಯಾಂಪ್ ಸೇರುವಂತೆ ಕೇಳಿಕೊಂಡಿದೆ. ಹೀಗಾಗಿ ಇವರು ಇಂದಿನಿಂದ ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ” ಎಂದು ಇನ್​ಸೈಡ್ ಸ್ಪೋರ್ಟ್ಸ್​ ವರದಿ ಮಾಡಿದೆ. ಐಸಿಸಿ ಟಿ20 ವಿಶ್ವಕಪ್​ಗಾಗಿ ಲಂಕಾ ತಂಡ ಎರಡು ಅಭ್ಯಾಸ ಪಂದ್ಯ ಆಡಬೇಕಿದೆ. ಮೊದಲ ಅಭ್ಯಾಸ ಪಂದ್ಯ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಹೀಗಾಗಿ ಅಕ್ಟೋಬರ್ 10ಕ್ಕೆ ಇಬ್ಬರು ಆಟಗಾರರು ಶ್ರೀಲಂಕಾ ತಂಡ ಸೇರಬೇಕಿದೆ ಎಸ್​ಎಲ್​ಸಿ ಹೇಳಿದೆ.

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಚರಣಕ್ಕೆ ಆಸ್ಟ್ರೇಲಿಯಾ ಸ್ಪಿನ್ನರ್‌ ಆಡಂ ಝಾಂಪ ಅಲಭ್ಯರಾದ ಕಾರಣ ಅವರ ಸ್ಥಾನಕ್ಕೆ ಶ್ರೀಲಂಕಾ ಸ್ಪಿನ್‌ ಆಲ್‌ರೌಂಡರ್‌ ವಾನಿಂದು ಹಸರಂಗ ಅವರನ್ನು ಆರ್​ಸಿಬಿ ತನ್ನ ತಂಡಕ್ಕೆ ಸೇರ್ಪಡೆ ಮಾಡಿತ್ತು. ಇವರ ಜೊತೆಗೆ ಶ್ರೀಲಂಕಾದ ಮತ್ತೊಬ್ಬ ಆಟಗಾರ ದುಷ್ಮಾಂತ ಚಮೀರಾ ಅವರನ್ನು ವೇಗಿ ಕೇನ್‌ ರಿಚರ್ಡ್ಸನ್‌ ಅವರ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.

ಇತ್ತ ಕೆಕೆಆರ್ ತಂಡಕ್ಕೂ ಹೊಡೆತ ಬಿದ್ದಿದೆ. ಕೋಲ್ಕತ್ತಾದ ಪ್ರಮುಖ ಆಲ್ರೌಂಡರ್ ಶಕೀಬ್ ಹಲ್ ಹಸನ್ ತನ್ನ ರಾಷ್ಟ್ರೀಯ ತಂಡ ಬಾಂಗ್ಲಾದೇಶವನ್ನು ಇಂದು ಸೇರಲಿದ್ದಾರೆ. ಹೀಗಾಗಿ ಇವರು ಕೂಡ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಒಟ್ಟಾರೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಉಭಯ ತಂಡಗಳು ಇಂದು ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಮಾಡು ಇಲ್ಲವೇ ಮಡಿ ಪಂದ್ಯವಾದ ಕಾರಣ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಜಯ ಯಾರಿಗೆ ಎಂಬುದು ಕಾದುನೋಡಬೇಕಿದೆ.

MS Dhoni: ಕಳೆದ ವರ್ಷ ಮೊದಲ ತಂಡವಾಗಿ ಹೊರಕ್ಕೆ, ಈ ಬಾರಿ ಫೈನಲ್​ಗೆ: ಪಂದ್ಯ ಮುಗಿದ ಬಳಿಕ ಧೋನಿ ಆಡಿದ ಮಾತು ಕೇಳಿ

Virat Kohli: ಧೋನಿ ಫಿನಿಶಿಂಗ್ ಆಟ ಕಂಡು ಬೆರಗಾದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?

(RCB Royal Challengers Bangalore in shock as Hasaranga and Chameera gets out of IPL 2021 before match against KKR)