15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಪಂದ್ಯದಲ್ಲಿ ದೊಡ್ಡ ರನ್ ಕಲೆಹಾಕಿ ಸೋತರೂ ನಂತರ ಆಡಿದ ಮೂರೂ ಪಂದ್ಯಗಳಲ್ಲಿ ಅಮೋಘ ಆಟವಾಡಿ ಹ್ಯಾಟ್ರಿಕ್ ಜಯದೊಂದಿಗೆ ಐಪಿಎಲ್ 2022 ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡ ಉತ್ತಮ ಲಯಕ್ಕೆ ಬಂದಿದೆ ಎಂಬೊತ್ತಿಗೆ ಇದೀಗ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಪ್ಲೇಯರ್, ಬೌಲಿಂಗ್ನಲ್ಲಿ ಆರ್ಸಿಬಿಯ ಆಪತ್ಭಾಂದವ ಎಂದೇ ಹೇಳಲಾಗುವ ಹರ್ಷಲ್ ಪಟೇಲ್ (Harshal Patel) ಐಪಿಎಲ್ನ ಬಯೋ ಬಬಲ್ ತೊರೆದಿದ್ದಾರೆ. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದ ಬಳಿಕ ಹರ್ಷಲ್ ಬಯೋ ಬಬಲ್ನಿಂದ (IPL bio-bubble) ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇವರು ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದಿದ್ದಾರೆ ಎಂದು ತಿಳಿದುಬಂದಿದೆ. ಇದು ಫಾಫ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ.
ಮೂಲಗಳ ಪ್ರಕಾರ, ಹರ್ಷಲ್ ಪಟೇಲ್ ಅವರ ಸಹೋದರಿ ನಿಧನ ಹೊಂದಿದ ಕಾರಣ ಅವರು ಮುಂಬೈ ವಿರುದ್ಧದ ಪಂದ್ಯ ಮುಗಿದ ಬಳಿಕ ಪಣೆಯಿಂದ ತಮ್ಮ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 12 ರಂದು ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಹೊತ್ತಿಗೆ ಹರ್ಷಲ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹಾಗೊಂದುವೇಳೆ ಇವರು ಆರ್‌ಸಿಬಿ ತಂಡ ಸೇರಿಕೊಂಡರೂ ಐಪಿಎಲ್ ನಿಯಮದ ಪ್ರಕಾರ ಕಡ್ಡಾಯ ಕ್ವಾರಂಟೈನ್ ಆದ ನಂತರವಷ್ಟೆ ಕಣಕ್ಕಿಳಿಯಬೇಕಾಗಿದೆ.
ಹರ್ಷಲ್ ಪಟೇಲ್ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಕಳೆದ ಕೆಲವು ಸೀಸನ್ಗಳಿಂದ ತಂಡಕ್ಕೆ ಅಪಾರ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ಇವರು ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಕೂಡ ತೊಟ್ಟಿದ್ದರು. ಇದೇ ಕಾರಣಕ್ಕೆ ಇವರನ್ನು ಐಪಿಎಲ್ 2022 ಮೆಗಾ ಹರಾಜಿನಲ್ಲಿ ಆರ್‌ಸಿಬಿ ದೊಡ್ಡ ಮೊತ್ತ ನೀಡಿ ಖರೀದಿ ಮಾಡಿತ್ತು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಪಟೇಲ್ ಕೇವಲ 23 ರನ್ ನೀಡಿ 2 ಪ್ರಮುಖ ವಿಕೆಟ್ ಕಿತ್ತು ಮಿಂಚಿದ್ದರು. ತಮ್ಮ ಸ್ಲೋವಲ್ ಬಾಲ್ ಮೂಲಕವೇ ಇವರು ಫೇಮಸ್ ಆಗಿದ್ದಾರೆ.
ಆರ್‌ಸಿಬಿ vs ಮುಂಬೈ ಪಂದ್ಯದಲ್ಲಿ ಏನಾಯಿತು?:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಆಡಿದರು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ತಲಾ 26 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಾರ್ ಬ್ಯಾಟರ್ಗಳೆಲ್ಲ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆದರೆ, ಏಳನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ (68*) ಜತೆ ಕೈಜೋಡಿಸಿದ ಜಯದೇವ್ ಉನಾದ್ಕಟ್ ಸಮಯೋಚಿತ ಆಟವಾಡಿ ಬೆಂಬಲವನ್ನು ನೀಡಿದರು. ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತು. ಗೆಲ್ಲಲು ಸಾಧಾರಣ ಸವಾಲು ಪಡೆದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಫಾ ಡುಪ್ಲೆಸಿಸ್ (16) ಮತ್ತು ಅನುಜ್ ರಾವತ್ ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ 50 ರನ್ ಪೇರಿಸಿದರು. ನಂತರ ವಿರಾಟ್ ಕೊಹ್ಲಿ (48)-ರಾವತ್ (66) ಭರ್ಜರಿ ಆಟವಾಡಿದರು. ಇದರಿಂದ ಬೆಂಗಳೂರು 18.3 ಓವರ್ನಲ್ಲೇ 152 ರನ್ ಚಚ್ಚಿ ಜಯ ಸಾಧಿಸಿತು.
Virat Kohli: ಪಂದ್ಯದ ಮಧ್ಯೆ ಕೊಹ್ಲಿ ಬಳಿ ಓಡಿ ಬಂದ ರೋಹಿತ್ ಅಭಿಮಾನಿ: ನಂತರ ಆಗಿದ್ದೇನು ನೋಡಿ