AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs DC: ಬೆಂಗಳೂರಿನಲ್ಲಿ ಸತತ ನಾಲ್ಕನೇ ಪಂದ್ಯ ಸೋತ ಆರ್​ಸಿಬಿ; ಸೆಮೀಸ್ ಹಾದಿ ಕಠಿಣ

WPL 2025: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಆರ್‌ಸಿಬಿ ತಂಡವು 148 ರನ್ ಗಳಿಸಿದರೆ, ಡೆಲ್ಲಿ ತಂಡವು ಒಂದೇ ವಿಕೆಟ್ ನಷ್ಟದೊಂದಿಗೆ ಗುರಿ ಮುಟ್ಟಿತು. ಶಫಾಲಿ ವರ್ಮಾ ಮತ್ತು ಜೆಸ್ ಜೊನಾಸ್ಸೆನ್ ಅವರ ಅದ್ಭುತ ಆಟದಿಂದ ಡೆಲ್ಲಿ ತಂಡ ಗೆಲುವು ಸಾಧಿಸಿತು. ಆರ್‌ಸಿಬಿ ತಂಡಕ್ಕೆ ಇದು ಸತತ ನಾಲ್ಕನೇ ಸೋಲು.

RCB vs DC: ಬೆಂಗಳೂರಿನಲ್ಲಿ ಸತತ ನಾಲ್ಕನೇ ಪಂದ್ಯ ಸೋತ ಆರ್​ಸಿಬಿ; ಸೆಮೀಸ್ ಹಾದಿ ಕಠಿಣ
ಆರ್​ಸಿಬಿ Vs ಡೆಲ್ಲಿ
ಪೃಥ್ವಿಶಂಕರ
|

Updated on: Mar 01, 2025 | 10:55 PM

Share

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡವು ಆರ್‌ಸಿಬಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದರೆ, ಇತ್ತ ಆರ್​ಸಿಬಿ ಸತತ ನಾಲ್ಕನೇ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ವಾಸ್ತವವಾಗಿ ಆರ್​ಸಿಬಿ ತನ್ನ ತವರಿನಲ್ಲಿ ಆಡಿದ ನಾಲ್ಕಕ್ಕೇ ನಾಲ್ಕು ಪಂದ್ಯಗಳಲ್ಲಿ ಸೋಲಿಗೆ ಕೊರಳೊಡ್ಡಿತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ನಾಯಕತ್ವ ಕಾರಣ ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 148 ರನ್ ಕಲೆಹಾಕಲಷ್ಟೇ ಶಕ್ತವಾಯಿತು. 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಡೆಲ್ಲಿಗೆ ಸುಲಭ ಜಯ

148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆದರೆ ಈ ಅಲ್ಪ ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭ ಕಳಪೆಯಾಗಿತ್ತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ 12 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಅವರ ಔಟಾದ ನಂತರ, ಶಫಾಲಿ ವರ್ಮಾ ಮತ್ತು ಜೆಸ್ ಜೊನಾಸ್ಸೆನ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಬ್ಬರೂ 146 ರನ್‌ಗಳ ಜೊತೆಯಾಟವನ್ನು ನೀಡಿದರು.

ಈ ಸಮಯದಲ್ಲಿ, ಶಫಾಲಿ ವರ್ಮಾ 43 ಎಸೆತಗಳಲ್ಲಿ 80 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಇತ್ತ ಜೆಸ್ ಜೊನಾಸ್ಸೆನ್ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 61 ರನ್ ಗಳಿಸಿದರು. ಆರ್‌ಸಿಬಿ ಪರ ರೇಣುಕಾ ಸಿಂಗ್ ಠಾಕೂರ್ ಏಕೈಕ ವಿಕೆಟ್ ಪಡೆದರು.

ಎಲಿಸ್ ಪೆರ್ರಿ ಅರ್ಧಶತಕ

ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ವಿಕೆಟ್‌ಗಳಿಗೆ 147 ರನ್ ಗಳಿಸಿತು. ಆರ್‌ಸಿಬಿ ಪರ ಎಲಿಸ್ ಪೆರ್ರಿ ಮತ್ತೊಮ್ಮೆ ಟ್ರಬಲ್‌ಶೂಟರ್ ಪಾತ್ರವನ್ನು ನಿರ್ವಹಿಸಿ 47 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಅಷ್ಟೇ ಬೌಂಡರಿಗಳೊಂದಿಗೆ 60 ರನ್ ಗಳಿಸಿದರು. ಅವರಲ್ಲದೆ, ರಾಘವಿ ಬಿಶ್ತ್ 32 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ಸಹಿತ 33 ರನ್ ಗಳಿಸಿದರು.

ಈ ಇನ್ನಿಂಗ್ಸ್‌ನೊಂದಿಗೆ, ಪೆರ್ರಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಈ ಋತುವಿನಲ್ಲಿ ಅವರು ಆರು ಪಂದ್ಯಗಳಲ್ಲಿ 98.33 ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ. ದೆಹಲಿ ಪರ ಶಿಖಾ ಪಾಂಡೆ ಮತ್ತು ಶ್ರೀ ಚರಣಿ ತಲಾ 28 ರನ್‌ಗಳಿಗೆ ತಲಾ ಎರಡು ವಿಕೆಟ್ ಪಡೆದರು. ಮರಿಜಾನ್ನೆ ಕಪ್ಪ್ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ