ಅಭಿಮಾನಿಗಳಿಗಾಗಿ ವಿಶೇಷ ಪ್ರಣಾಳಿಕೆ ಮುಂದಿಟ್ಟ RCB

ಇಂಡಿಯನ್ ಪ್ರೀಮಿಯರ್ ಲೀಗ್ (IPL)​ 2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ‘ಕಪ್​’ಚುಕ್ಕೆ. ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ  RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ಆರ್​ಸಿಬಿ ಇದೀಗ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿವಹಿಸಲು ಮುಂದಾಗಿದೆ.

ಅಭಿಮಾನಿಗಳಿಗಾಗಿ ವಿಶೇಷ ಪ್ರಣಾಳಿಕೆ ಮುಂದಿಟ್ಟ RCB
Rcb

Updated on: Sep 01, 2025 | 1:29 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಅಂಟಿಕೊಂಡಿರುವ ‘ಕಪ್’​ಚುಕ್ಕೆಯನ್ನು ತೊಡೆದು ಹಾಕಲು ಆರ್​ಸಿಬಿ ಫ್ರಾಂಚೈಸಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅದು ಕೂಡ ಅಭಿಮಾನಿಗಳಿಗಾಗಿ ಎಂಬುದು ವಿಶೇಷ. ಕೆಲ ದಿನಗಳ ಹಿಂದೆಯಷ್ಟೇ ಆರ್​ಸಿಬಿ ಕೇರ್ಸ್ (RCB Cares) ಮೂಲಕ ಅಭಿಮಾನಿಗಳ ಪರ ನಿಲ್ಲುವುದಾಗಿ ಘೋಷಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಒಂದಷ್ಟು ಗುರಿಗಳೊಂದಿಗೆ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಆರ್​ಸಿಬಿ ಕೇರ್ಸ್​ನ ಮುಖ್ಯ ಗುರಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯುಆರ್‌ಸಿಬಿ ಕೇರ್ಸ್” ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಲಿದೆ. ಇದು ಕೇವಲ ಅಲ್ಪಾವಧಿಯ ಅಭಿಯಾನವಲ್ಲ. ಬದಲಾಗಿ ದೀರ್ಘಾವಧಿಯ ಭರವಸೆ ಎಂದು ಆರ್​ಸಿಬಿ ಹೇಳಿಕೊಂಡಿದೆ. ಈ ಅಭಿಯಾನಕ್ಕಾಗಿ ಆರ್​ಸಿಬಿ 6 ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಮುಂದಿಟ್ಟಿದೆ. ಆ ಪ್ರಣಾಳಿಕೆಯ ಸಾರಾಂಶ ಈ ಕೆಳಗಿನಂತಿದೆ…

ಅಗತ್ಯ ಬೆಂಬಲ ಒದಗಿಸುವುದು: ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಬಾಧಿತ ಕುಟುಂಬಗಳಿಗೆ ತ್ವರಿತ, ಪಾರದರ್ಶಕ ಮತ್ತು ಮಾನವೀಯ ರೀತಿಯಲ್ಲಿ ಸಹಾಯವನ್ನು ತಲುಪಿಸುವುದು.

ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು: ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ನಿರ್ವಹಿಸುವುದು.

ಸಮುದಾಯ ಸಬಲೀಕರಣ: ಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.

ಸ್ವತಂತ್ರ ಸಂಶೋಧನೆ ಮತ್ತು ಸುರಕ್ಷತಾ ಹೂಡಿಕೆಗಳು: ಅಭಿಮಾನಿ-ಸುರಕ್ಷತಾ ಲೆಕ್ಕಪರಿಶೋಧನಾ ಚೌಕಟ್ಟನ್ನು ರಚಿಸಿ ಮತ್ತು ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಕುರಿತು ಸ್ಥಳೀಯ ತಂಡಗಳಿಗೆ ತರಬೇತಿ ನೀಡುವುದು.

ಅಭಿಮಾನಿಗಳ ಸ್ಮರಣೆ: ಆರ್‌ಸಿಬಿಯ ಅತ್ಯಂತ ಉತ್ಸಾಹಭರಿತ ಅಭಿಮಾನಿಗಳ ಕಥೆಗಳು ಮತ್ತು ಹೆಸರುಗಳನ್ನು ಗೌರವಿಸಲು ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳವನ್ನು ರಚಿಸುವುದು.

ಕ್ರೀಡಾ ಭವಿಷ್ಯ ನಿರ್ಮಾಣ: ಈ ತಂಡದ ಮೇಲಿನ ನಂಬಿಕೆ ಕ್ರೀಡಾಂಗಣಗಳಿಗೆ ಮಾತ್ರ ಸೀಮಿತವಾಗಿರಬಾರದು. ಕ್ರೀಡಾಂಗಣಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಸ್ಥಳೀಯ ಪ್ರತಿಭೆಗಳನ್ನು ಪೋಷಿಸಿ ಮತ್ತು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಂಬಲಿಸುವುದು.

ಈ ಆರು ಉಪಕ್ರಮಗಳ ಮೂಲಕ ಆರ್​ಸಿಬಿ ಕೇರ್ಸ್ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದೆ. ಈ ನಡೆಯು ಆರ್‌ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ, ಜವಾಬ್ದಾರಿಯುತ ಸಂಸ್ಥೆಯಾಗಿ ಸಮಾಜಕ್ಕೆ ಬದ್ಧವಾಗಿದೆ ಎಂದು ತೋರಿಸುತ್ತದೆ. 

ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!

ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಾಲ್ತುಳಿತದಿಂದ ಮೃತಪಟ್ಟ  11 ಅಭಿಮಾನಿಗಳ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿರುವುದಾಗಿ ತಿಳಿಸಿತ್ತು. ಇದೀಗ ಹೊಸ ಪ್ರಣಾಳಿಕೆಯೊಂದಿಗೆ ಆರ್​ಸಿಬಿ ಅಭಿಮಾನಿಗಳ ಬಗ್ಗೆ ಮತ್ತಷ್ಟು ಕಾಳಜಿವಹಿಸುವ ಭರವಸೆ ನೀಡಿದ್ದಾರೆ.

 

Published On - 1:27 pm, Mon, 1 September 25