ಅಂದು RCB ಆಟಗಾರನ ಹೀಯಾಳಿಸಿ ಇಂದು ದೂರು ನೀಡಿದ CSK

IPL 2026 RCB vs CSK: ಐಪಿಎಲ್​ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಆರ್​ಸಿಬಿ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಬಿಸಿಸಿಐಗೆ ದೂರು ನೀಡಿದ್ದಾರೆ.

ಅಂದು RCB ಆಟಗಾರನ ಹೀಯಾಳಿಸಿ ಇಂದು ದೂರು ನೀಡಿದ CSK
RCB vs CSK

Updated on: Apr 16, 2026 | 11:04 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಮೈದಾನದ ಹೋರಾಟಕ್ಕೆ ಮಾತ್ರವಲ್ಲದೆ, ಅಭಿಮಾನಿಗಳ ನಡುವಿನ ಜಿದ್ದಾಜಿದ್ದಿಗೂ ಹೆಸರುವಾಸಿ. ಆದರೆ, ಈ ಬಾರಿ ಈ ಪೈಪೋಟಿ ಮೈದಾನದ ಹೊರಗೆ ‘ಸಾಂಸ್ಕೃತಿಕ ಅವಮಾನ’ದ ತಿರುವು ಪಡೆದುಕೊಂಡಿದೆ. ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ನಡುವಿನ ಪಂದ್ಯದ ವೇಳೆ ನಡೆದ ‘ಇಡ್ಲಿ-ಸಾಂಬಾರ್’ ಹಾಡಿನ ವಿವಾದ ಈಗ ಬಿಸಿಸಿಐ (BCCI) ಮೆಟ್ಟಿಲೇರಿದೆ.

ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಆರ್​ಸಿಬಿ ಡಿಜೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಅವಮಾನಿಸಿದ್ದಾರೆ ಎಂದು ಸಿಎಸ್​ಕೆ ಮ್ಯಾನೇಜ್ಮೆಂಟ್ ದೂರು ನೀಡಿದ್ದಾರೆ.​

ಆರ್‌ಸಿಬಿ ಡಿಜೆ ಉದ್ದೇಶಪೂರ್ವಕವಾಗಿ ಆ ಹಳೆಯ ಹಾಡನ್ನು ಪ್ಲೇ ಮಾಡಿ ಸಿಎಸ್‌ಕೆ ಆಟಗಾರರನ್ನು ಮತ್ತು ತಮಿಳುನಾಡಿನ ಸಂಸ್ಕೃತಿಯನ್ನು ಅವಹೇಳನ ಮಾಡಿದ್ದಾರೆ. ಹೋಮ್ ಟೀಮ್ ಬೆಂಬಲಿಸುವುದು ಸಹಜ, ಆದರೆ ಎದುರಾಳಿ ತಂಡದ ಆಟಗಾರರನ್ನು ಹೀಗಳೆಯುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು. ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಡಿಜೆ ಕೂಡ ಇಂತಹದ್ದೇ ಅತಿರೇಕದ ವರ್ತನೆ ತೋರಿದ್ದರು. ಐಪಿಎಲ್ 2025ರ ವೇಳೆ ಆರ್​ಸಿಬಿ ನಡೆಸಿದ ಚಿಟ್​ ಚಾಟ್​ನಲ್ಲಿ “ಚೆನ್ನೈ ಎಂದ ತಕ್ಷಣ ನಿಮ್ಮ ನೆನಪಿಗೆ ಬರುವುದು ಏನು?” ಎಂದು ಕೇಳಲಾಗಿತ್ತು. ಈ ವೇಳೆ ಜಿತೇಶ್ ಶರ್ಮಾ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಎಂಬ ಹಾಡನ್ನು ಅತಿರಂಜಿತ ಧಾಟಿಯಲ್ಲಿ ಹಾಡಿದ್ದರು.

ಇದಕ್ಕೆ ಪ್ರತಿಯಾಗಿ ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಸಿಎಸ್‌ಕೆ ಡಿಜೆ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಹಾಡನ್ನು ಪ್ಲೇ ಮಾಡಿ ತಿರುಗೇಟು ನೀಡಿದ್ದರು.

ಇದೀಗ ಆರ್​ಸಿಬಿ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಅವಹೇಳನ ಮಾಡಿದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ಹೀಯಾಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಜಿತೇಶ್ ಶರ್ಮಾ ಅವರನ್ನು ಅವಮಾನಿಸಿದ ಸಿಎಸ್​ಕೆ ಡಿಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದು ಸುಮ್ಮನಿದ್ದ ಸಿಎಸ್​ಕೆ ಇಂದು ಅವಮಾನವಾಗಿದೆ ಎನ್ನುತ್ತಿರುವುದು ನ್ಯಾಯವೇ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

 

 

Follow Us