AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ನಮಗೆ ಅವಮಾನ ಮಾಡಿದ್ದಾರೆ! ದೂರು ದಾಖಲಿಸಿದ CSK

IPL 2026 RCB vs CSK: ಐಪಿಎಲ್​ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಏಪ್ರಿಲ್ 5 ರಂದು ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 250 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ 207 ರನ್​ಗಳಿಸಿ 43 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು. ಈ ಪಂದ್ಯದ ವೇಳೆ ನಡೆದ ಘಟನೆಗಳ ಬಗ್ಗೆ ಇದೀಗ ಸಿಎಸ್​ಕೆ ಮ್ಯಾನೇಜ್ಮೆಂಟ್ ದೂರು ದಾಖಲಿಸಿದ್ದಾರೆ.

RCB ನಮಗೆ ಅವಮಾನ ಮಾಡಿದ್ದಾರೆ! ದೂರು ದಾಖಲಿಸಿದ CSK
RCB vs CSK
ಝಾಹಿರ್ ಯೂಸುಫ್
|

Updated on: Apr 16, 2026 | 9:24 AM

Share

IPL 2026: ಐಪಿಎಲ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿ ಅಂದರೆ ಅದು ಬರೀ ಪಂದ್ಯವಲ್ಲ, ಅದೊಂದು ಎಮೋಷನ್. ಈ ಬಾರಿಯ ‘ಸೌತ್ ಡರ್ಬಿ’ ಪಂದ್ಯವು ಬ್ಯಾಟ್-ಬಾಲ್ ಕಾಳಗವನ್ನು ಮೀರಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡದ ಡಿಜೆ ವರ್ತನೆಯ ವಿರುದ್ಧ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ (BCCI) ಅಧಿಕೃತ ದೂರು ನೀಡಿದೆ.

ವಿವಾದದ ಮೂಲವೇನು?

ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧ ಪಂದ್ಯದ ವೇಳೆ ಸಿಎಸ್‌ಕೆ ಆಟಗಾರರು ಔಟಾದಾಗ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ರಂಜಿಸುವ ನೆಪದಲ್ಲಿ ಡಿಜೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಮೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಸಿಎಸ್‌ಕೆ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಸಿಎಸ್‌ಕೆ ನೀಡಿದ ದೂರಿನಲ್ಲಿ ಏನಿದೆ?

ಚೆನ್ನೈ ಸೂಪರ್ ಕಿಂಗ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ದೂರಿನಲ್ಲಿರುವ ಮುಖ್ಯ ಅಂಶಗಳು ಈ ಕೆಳಗಿನಂತಿವೆ…

  • ಗೌರವಕ್ಕೆ ಧಕ್ಕೆ: “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು ಅವರು ವಾದಿಸಿದ್ದಾರೆ.
  • ಅವಹೇಳನಕಾರಿ ಕಾಮೆಂಟ್: ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ನೇಮಿಸಿದ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂಬುದು ತಂಡದ ಆರೋಪ.
  • ಅವಮಾನ: “ಡಿಜೆಗಳು ತವರು ತಂಡವನ್ನು ಬೆಂಬಲಿಸಲಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ಸರಿಯಲ್ಲ” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.

ಹಳೆಯ ದ್ವೇಷದ ಮುಂದುವರಿಕೆ?

ಈ ವಿವಾದಕ್ಕೆ 2025ರ ಐಪಿಎಲ್ ಸೀಸನ್‌ನ ನಂಟೂ ಇದೆ. ಕಳೆದ ವರ್ಷ ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಈ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಚನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಅಲ್ಲಿನ ಡಿಜೆ ಕೂಡ ಇದಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದರು. ಆಗ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮಧ್ಯಪ್ರವೇಶಿಸಿ ಇದನ್ನು ತಡೆದಿತ್ತು. ಈಗ ಬೆಂಗಳೂರಿನಲ್ಲಿ ಅದೇ ರೀತಿಯ ಘಟನೆ ಮರುಕಳಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.

ಬಿಸಿಸಿಐನ ಮುಂದಿನ ಹೆಜ್ಜೆ:

ಐಪಿಎಲ್ ಆಡಳಿತ ಮಂಡಳಿಯು ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆಯಂತಹ ಅಂಶಗಳು ನುಸುಳದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?

ಒಟ್ಟಾರೆಯಾಗಿ, ಐಪಿಎಲ್ ಅಂಗಳದಲ್ಲಿ ತಂಡಗಳ ನಡುವಿನ ಪೈಪೋಟಿ ಆರೋಗ್ಯಕರವಾಗಿದ್ದಷ್ಟು ಕ್ರಿಕೆಟ್‌ಗೆ ಚಂದ. ತವರು ತಂಡವನ್ನು ಬೆಂಬಲಿಸುವುದು ಡಿಜೆಗಳ ಕರ್ತವ್ಯವಾದರೂ, ಅದು ಎದುರಾಳಿ ತಂಡದ ಗೌರವಕ್ಕೆ ಧಕ್ಕೆ ತರುವಂತಿರಬಾರದು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಈಗ ಬಿಸಿಸಿಐ ಈ ದೂರನ್ನು ಹೇಗೆ ನಿಭಾಯಿಸಲಿದೆ ಮತ್ತು ಮುಂಬರುವ ಪಂದ್ಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow Us