WPL 2025: ತವರಿನಲ್ಲಿ ಸತತ 4ನೇ ಪಂದ್ಯದಲ್ಲೂ ಟಾಸ್ ಸೋತ ಆರ್​ಸಿಬಿ; ಸ್ಮೃತಿ ಪಡೆಗೆ ಅಗ್ನಿಪರೀಕ್ಷೆ

WPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದೆ. ಇದೀಗ ತವರಿನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿರುವ ಆರ್​ಸಿಬಿ ಸತತ 4ನೇ ಪಂದ್ಯದಲ್ಲೂ ಟಾಸ್ ಸೋತಿದೆ. ಟಾಸ್ ಸೋತರೂ ಗೆಲ್ಲುವ ಛಲದೊಂದಿಗೆ ಆರ್‌ಸಿಬಿ ಕಣಕ್ಕಿಳಿಯುತ್ತಿದೆ. ಈ ಪಂದ್ಯ ಆರ್‌ಸಿಬಿಗೆ ನಿರ್ಣಾಯಕವಾಗಿದ್ದು, ಉಳಿದ ಮೂರು ಪಂದ್ಯಗಳನ್ನು ಗೆಲ್ಲುವುದು ಮುಂದಿನ ಹಂತಕ್ಕೆ ಅವಶ್ಯಕ.

WPL 2025: ತವರಿನಲ್ಲಿ ಸತತ 4ನೇ ಪಂದ್ಯದಲ್ಲೂ ಟಾಸ್ ಸೋತ ಆರ್​ಸಿಬಿ; ಸ್ಮೃತಿ ಪಡೆಗೆ ಅಗ್ನಿಪರೀಕ್ಷೆ
ಆರ್​ಸಿಬಿ Vs ಡೆಲ್ಲಿ

Updated on: Mar 01, 2025 | 7:27 PM

ತವರು ನೆಲದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತವರಿನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (RCB vs DC) ಎದುರಿಸಲು ಸಜ್ಜಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಈ ಆವೃತ್ತಿಯ ಕೊನೆಯ ಪಂದ್ಯವಾಗಿದೆ. ಆ ಬಳಿಕ ಈ ಲೀಗ್ ಬೇರೆಡೆಗೆ ಸ್ಥಳಾಂತರವಾಗಲಿದೆ. ಹೀಗಾಗಿ ತವರಿನಲ್ಲಿ ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಇರಾದೆಯಲ್ಲಿರುವ ಆರ್​ಸಿಬಿಗೆ ಮತ್ತೊಮ್ಮೆ ಟಾಸ್ ಕೈಕೊಟ್ಟಿದೆ. ಬೆಂಗಳೂರಿನಲ್ಲಿ ಸ್ಮೃತಿಗೆ ಒಮ್ಮೆಯೂ ಟಾಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗೆಯೇ ಮ್ಯಾಚ್ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊನೆಯ ಪಂದ್ಯದಲ್ಲಿ ಟಾಸ್ ಸೋತರು ಮ್ಯಾಚ್ ಗೆಲ್ಲುವ ಗುರಿಯೊಂದಿಗೆ ಆರ್​ಸಿಬಿ ಕಣಕ್ಕಿಳಿಯುತ್ತಿದೆ.

4 ಪಂದ್ಯಗಳಲ್ಲೂ ಟಾಸ್ ಗೆಲ್ಲಲಿಲ್ಲ

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರೀಕ್ಷೆಯಂತೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಆರ್​ಸಿಬಿ ಇಂದು ಕೂಡ ಮೊದಲು ಬ್ಯಾಟಿಂಗ್ ಮಾಡಲಿದೆ. ವಾಸ್ತವವಾಗಿ ಆರ್​ಸಿಬಿ ಟಾಸ್ ಸೋತಿರುವ ಕಳೆದ ಮೂರು ಪಂದ್ಯಗಳಲ್ಲೂ ಟಾಸ್ ಸೋತಿದ್ದು, ಆ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು. ಆಡಿದ ಆ ಮೂರು ಪಂದ್ಯಗಳಲ್ಲೂ ಆರ್​ಸಿಬಿ ಸೋತಿದೆ. ಹೀಗಾಗಿ ಇಂದಿನ ಪಂದ್ಯ ಆರ್​ಸಿಬಿಗೆ ನಿರ್ಣಾಯಕವಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ತವರಿನ ಅಭಿಮಾನಿಗಳಿಗೆ ಗೆಲುವಿನ ಸವಿ ನೀಡಲು ಎದುರು ನೋಡುತ್ತಿದೆ.

ಆರ್​ಸಿಬಿ ಪ್ರಯಾಣ

ಹಾಲಿ ಚಾಂಪಿಯನ್ ಆರ್‌ಸಿಬಿ ವಡೋದರಾದಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಆದರೆ ಆ ನಂತರ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂದಿನ ಮೂರು ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಪಡೆ ಸೋಲನ್ನು ಎದುರಿಸಬೇಕಾಯಿತು. ಇದರಲ್ಲಿ ಯುಪಿ ವಾರಿಯರ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿನ ಸೋಲು ಕೂಡ ಸೇರಿದೆ. ಇದೀಗ ಈ ಲೀಗ್​ನಲ್ಲಿ ಆರ್​ಸಿಬಿ ಮುಂದಿನ ಹಂತವನ್ನು ತಲುಪಬೇಕೆಂದರೆ ಉಳಿದಿರುವ ಮೂರು ಪಂದ್ಯಗಳನ್ನು ಶತಾಯಗತಾಯ ಗೆಲ್ಲಲೇಬೇಕಿದೆ. ಇದು ಸಾಧ್ಯವಾಗದಿದ್ದರೆ, ಆರ್​ಸಿಬಿ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಬೇಕಾಗುತ್ತದೆ.

ಇದನ್ನೂ ಓದಿ: WPL 2025: ರಣರೋಚಕ ಪಂದ್ಯದಲ್ಲಿ ಆರ್​ಸಿಬಿಗೆ ವೀರೋಚಿತ ಸೋಲು

ಉಭಯ ತಂಡಗಳು

ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಡ್ಯಾನಿ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಾಘ್ವಿ ಬಿಸ್ಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಸ್ನೇಹ್ ರಾಣಾ, ಏಕ್ತಾ ಬಿಶ್ತ್, ರೇಣುಕಾ ಸಿಂಗ್ ಠಾಕೂರ್.

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸ್ಸೆನ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಸಾರಾ ಬ್ರೈಸ್ (ವಿಕೆಟ್ ಕೀಪರ್), ನಿಕಿ ಪ್ರಸಾದ್, ಮಿನ್ನು ಮಣಿ, ಶಿಖಾ ಪಾಂಡೆ, ಎನ್ ಚರಣಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Sat, 1 March 25