IPL 2025 Final: ಈ ಸಲ ಕಪ್ ನಮ್ದೇ….! ಫಲಿಸಿತು ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾರ್ಥನೆ

RCB Wins IPL 2025: ಆರ್​ಸಿಬಿ ಅಭಿಮಾನಿಗಳ 17 ವರ್ಷಗಳ ಕನಸು ಕೊನೆಗೂ ನನಸಾಗಿದೆ.ಅಹಮದಾಬಾದ್​ನಲ್ಲಿ ನಡೆದ ಐಪಿಎಲ್ ಫೈನಲ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಜಯ ಸಾಧಿಸಿದ ಆರ್​ಸಿಬಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಆರ್‌ಸಿಬಿಯ ಗೆಲುವು ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣವಾಗಿದೆ.

IPL 2025 Final: ಈ ಸಲ ಕಪ್ ನಮ್ದೇ....! ಫಲಿಸಿತು ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾರ್ಥನೆ
Rcb 2025

Updated on: Jun 04, 2025 | 12:18 AM

17 ವರ್ಷಗಳಿಂದ ಆರ್​ಸಿಬಿ ಕೈಗೆಟುಕದ ಗಗನ ಕುಸುಮವೊಂದು ಇದೀಗ ಐಪಿಎಲ್ (IPL 2025) ಕಿರೀಟವಾಗಿ ಆರ್​ಸಿಬಿ (RCB) ಮುಡಿಗೇರಿದೆ. ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾಥನೆ ಕೊನೆಗೂ ಫಲಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್​​ಗಳಿಂದ ಮಣಿಸಿದ ಆರ್​ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಿತು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಜೂನ್ 3 ರ ಮಂಗಳವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಈ ಬಾರಿ ತಮ್ಮ ಹೆಸರಿನ ಮುಂದೆ ಐಪಿಎಲ್ ಚಾಂಪಿಯನ್ ಎಂದು ಬರೆಯಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿದ್ದವು. ಇದಕ್ಕೆ ಒಂದು ಕಾರಣವಿತ್ತು. ಸೀಸನ್ ಪ್ರಾರಂಭವಾಗುವ ಮೊದಲೇ, 18 ನೇ ಸೀಸನ್‌ನಲ್ಲಿ 18 ನೇ ಜೆರ್ಸಿ ಸಂಖ್ಯೆ ಧರಿಸುವ ವಿರಾಟ್‌ಗೆ ಇದು ಅತ್ಯುತ್ತಮ ವರ್ಷವಾಗಿರಬಹುದು ಎಂದು ಪದೇ ಪದೇ ಹೇಳಲಾಗುತ್ತಿತ್ತು. ಅಭಿಮಾನಿಗಳು ಸಹ 18 ನೇ ದಿನದಂದೇ ಮಹಾಭಾರತ ಕೊನೆಗೊಂಡಿತ್ತು ಎಂದು ಹೇಳಲು ಪ್ರಾರಂಭಿಸಿದ್ದರು. ಅಂತಿಮವಾಗಿ ಈ ಎಲ್ಲಾ ಕಾಕತಾಳೀಯಗಳು ಕೊಹ್ಲಿ ಮತ್ತು ಆರ್‌ಸಿಬಿಗೆ ಅನುಕೂಲಕರವೆಂದು ಸಾಬೀತಾಗಿದೆ.

ಆರ್​ಸಿಬಿಗೆ ಆರಂಭಿಕ ಆಘಾತ

ಆದಾಗ್ಯೂ ಈ ಗೆಲುವು ಆರ್​ಸಿಬಿಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿ ಕೆಟ್ಟ ಆರಂಭವನ್ನು ಪಡೆಯಿತು. ಆರಂಭಿಕ ಫಿಲ್ ಸಾಲ್ಟ್ ಬಹುಬೇಗನೇ ಔಟಾದರು. ಆ ಬಳಿಕ ಮಾಯಾಂಕ್ ಅಗರ್ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಆಟಗಾರರು ಉತ್ತಮ ಆರಂಭವನ್ನು ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಇತ್ತ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದ ವಿರಾಟ್ ಕೊಹ್ಲಿಗೂ ಕೂಡ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ.

ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ

ವಿರಾಟ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಂತರಾದರೂ 35 ಎಸೆತಗಳಲ್ಲಿ ಕೇವಲ 43 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಂದ ಆರ್​​ಸಿಬಿ ಇನ್ನಿಂಗ್ಸ್ ಚೇತರಿಸಿಕೊಳ್ಳುವುದು ಕಷ್ಟ ಎಂದು ತೋರುತ್ತಿತ್ತು. ಆದರೆ ಈ ಸಮಯದಲ್ಲಿ ಕಣಕ್ಕಿಳಿದ ಜಿತೇಶ್ ಶರ್ಮಾ ತಮ್ಮ ಹೊಡಬಡಿ ಆಟದ ಮೂಲಕ ಕೇವಲ 10 ಎಸೆತಗಳಲ್ಲಿ 24 ರನ್​ಗಳ ಕಾಣಿಕೆ ನೀಡಿದರು. ಇಡೀ ಸೀಸನ್​​ ವಿಫಲರಾಗಿದ್ದ ಲಿವಿಂಗ್‌ಸ್ಟೋನ್ ಕೂಡ 25 ರನ್​ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಇತ್ತ ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ಪಂಜಾಬ್ ಪರ ತಲಾ 3 ವಿಕೆಟ್ ಪಡೆದರು.

ಕೃನಾಲ್ ಮ್ಯಾಜಿಕ್​ಗೆ ತತ್ತರಿಸಿದ ಪಂಜಾಬ್

ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಕೂಡ ಮೊದಲ 2-3 ಓವರ್‌ಗಳಲ್ಲಿ ವೇಗವಾಗಿ ಆಟ ಆರಂಭಿಸಿತು. ಆದರೆ ಕೃನಾಲ್ ಪಾಂಡ್ಯ (2/17) ದಾಳಿಗೆ ಇಳಿದ ತಕ್ಷಣ, ಅವರು ಮೊದಲ ಬ್ರೇಕ್‌ಥ್ರೂ ಗಳಿಸಿದ್ದಲ್ಲದೆ, ರನ್‌ ವೇಗವನ್ನು ಸಹ ಕಡಿಮೆ ಮಾಡಿದರು. ಆದರೆ 10 ನೇ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ ತನ್ನ ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದ ಬಳಿಕ ಆರ್​ಸಿಬಿಯ ಗೆಲುವು ಖಚಿತವಾಯಿತು. ಇಲ್ಲಿಂದ ಅದ್ಭುತ ಪುನರಾಗಮನ ಮಾಡಿ, 13 ನೇ ಓವರ್‌ನಲ್ಲಿ ಜೋಶ್ ಇಂಗ್ಲಿಸ್ ಅವರನ್ನು ಸಹ ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾಯಿತು. ಕ್ರೀಸ್​ನಲ್ಲಿರುವವರೆಗೂ ಆರ್​​ಸಿಬಿಗೆ ಸೋಲಿನ ಭಯ ಹುಟ್ಟಿಸಿದ್ದ ಜೋಶ್ ಇಂಗ್ಲಿಸ್ (39) ಅವರ ವಿಕೆಟ್ ಅನ್ನು ಕೃನಾಲ್ ಪಾಂಡ್ಯ ಪಡೆದರು.

RCB Won IPL Trophy: ಗರ್ವದಿಂದ ಹೇಳಿ ‘ಈ ಸಲ ಕಪ್ ನಮ್ದೆ’: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್​ಸಿಬಿ

ಶಶಾಂಕ್ ಹೋರಾಟ ವ್ಯರ್ಥ

ಇಲ್ಲಿಂದ ಪಂಜಾಬ್‌ ಸೋಲು ಖಚಿತವಾಯಿತ್ತಾದರೂ, ನೆಹಾಲ್ ವಧೇರಾ, ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೊಯಿನಿಸ್‌ರಂತಹ ಆಟಗಾರರು ಇದ್ದ ಕಾರಣ ಆರ್​ಸಿಬಿ ಮೈಮರೆಯುವಂತಿರಲಿಲ್ಲ. ಆದರೆ 17 ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ವಧೇರಾ ಮತ್ತು ಸ್ಟೊಯಿನಿಸ್‌ರ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಸೋಲಿಗೆ ಮುದ್ರೆ ಹಾಕಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 29 ರನ್‌ಗಳು ಬೇಕಾಗಿದ್ದವು. ಸ್ಟ್ರೈಕ್​ನಲ್ಲಿದ್ದ ಶಶಾಂಕ್ ಸಿಂಗ್ (ಔಟಾಗದೆ 60) 3 ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸುವ ಮೂಲಕ ಬಿರುಗಾಳಿಯ ಅರ್ಧಶತಕ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Tue, 3 June 25