2024ರ ಐಪಿಎಲ್ಗೆ (IPL 2024) ಈಗಿನಿಂದಲೇ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸ್, ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಈ ಹಿಂದೆ ತಂಡದ ಮುಖ್ಯ ಕೋಚ್ ಹಾಗೂ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದ ಸಂಜಯ್ ಬಂಗಾರ್ ಮತ್ತು ಮೈಕ್ ಹೆಸ್ಸನ್ರನ್ನು (Mike Hesson and Sanjay Bangar) ತಂಡದಿಂದ ಕೈಬಿಟ್ಟಿರುವ ಆರ್ಸಿಬಿ, ಅವರ ಸ್ಥಾನಕ್ಕೆ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಹಾಗೂ ಇಂಗ್ಲೆಂಡ್ ತಂಡದ ಮಾಜಿ ತರಬೇತುದಾರರಾಗಿರುವ ಆ್ಯಂಡಿ ಫ್ಲವರ್ (Andy Flower) ಅವರನ್ನು ಆಯ್ಕೆ ಮಾಡಿದೆ. ವಾಸ್ತವವಾಗಿ ಸಂಜಯ್ ಬಂಗಾರ್ ಮತ್ತು ಮೈಕ್ ಹೆಸ್ಸನ್ ಅವರ ಅಧಿಕಾರವದಿ ಈ ವರ್ಷಕ್ಕೆ ಅಂತ್ಯವಾಗಿತ್ತು. ಈ ಇಬ್ಬರನ್ನು ತಂಡದೊಂದಿಗೆ ಇರಿಸಿಕೊಳ್ಳಲು ಉತ್ಸಾಹ ತೋರದ ಫ್ರಾಂಚೈಸ್, ಈ ಇಬ್ಬರಿಗೆ ತಂಡದಿಂದ ಕೋಕ್ ನೀಡಿದೆ. ಇದೀಗ ತಂಡದೊಂದಿಗೆ ಸಂಬಂಧ ಕಡಿದುಕೊಂಡ ತಂಡದ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆರ್ಸಿಬಿ ಫ್ರಾಂಚೈಸ್ಗೆ ಧನ್ಯವಾದ ತಿಳಿಸಿದ್ದಾರೆ.
ವಾಸ್ತವವಾಗಿ ಆರ್ಸಿಬಿಯಲ್ಲಿ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಅಧಿಕಾರವಧಿ ಈ ಸೆಪ್ಟಂಬರ್ಗೆ ಅಂತ್ಯಗೊಳ್ಳುತ್ತಿದೆ. ಈ ಇಬ್ಬರು ಕೂಡ ತಂಡದೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಮಾಡಲು ಸಿದ್ದರಿದ್ದರು. ಆದರೆ ಆರ್ಸಿಬಿ ಫ್ರಾಂಚೈಸಿ ಈ ಇಬ್ಬರ ಒಪ್ಪಂದವನ್ನು ಮುಂದುವರೆಸಲು ಇಚ್ಚಿಸಲಿಲ್ಲ. ಹೀಗಾಗಿ ಆರ್ಸಿಬಿಯೊಂದಿಗೆ ಈ ಇಬ್ಬರ ಸಂಬಂಧ ಅಂತ್ಯಗೊಂಡಿದೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಹೆಸ್ಸನ್, ಆರ್ಸಿಬಿ ಅಭಿಮಾನಿಗಳಿಗೆ ಮತ್ತು ಅವಕಾಶವನ್ನು ನೀಡಿದ ಮಾಲೀಕರಿಗೆ ಧನ್ಯವಾದ ತಿಳಿಸಿದ್ದಾರೆ.
Breaking: ಆರ್‌ಸಿಬಿಗೆ ಆ್ಯಂಡಿ ಫ್ಲವರ್ ಹೊಸ ಮುಖ್ಯ ಕೋಚ್! ಖಚಿತ ಪಡಿಸಿದ ಫ್ರಾಂಚೈಸ್
ಹಾಗೆಯೇ ತಮ್ಮ ಪೋಸ್ಟ್ನಲ್ಲಿ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಹೆಸ್ಸನ್, ‘ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾರ್ಗದರ್ಶನ ಮಾಡಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ. ಕಳೆದ 4 ಸೀಸನ್‌ಗಳಲ್ಲಿ ನಾವು 3 ಪ್ಲೇಆಫ್‌ಗಳನ್ನು ಆಡಿದ್ದೇವೆ. ಆದರೆ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳು ಇಷ್ಟಪಡುವ ಟ್ರೋಫಿಯನ್ನು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಆರ್‌ಸಿಬಿಯನ್ನು ತೊರೆಯುತ್ತಿರುವುದು ಬೇಸರ ತಂದಿದ್ದರೂ, ತಂಡದ ಒಳಗೆ ಮತ್ತು ಹೊರಗೆ ಮಹಾನ್ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಹಲವು ನೆನಪುಗಳನ್ನು ಹೊಂದಿದ್ದೇನೆ’.
‘ನನಗೆ ತಂಡದಲ್ಲಿ ಅವಕಾಶ ನೀಡಿದ ಮ್ಯಾನೇಜ್‌ಮೆಂಟ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ಆರ್ಸಿಬಿಯ ಹೊಸ ಕೋಚಿಂಗ್ ತಂಡಕ್ಕೆ ಶುಭ ಹಾರೈಸುತ್ತೇನೆ. ಕೊನೆಯದಾಗಿ ನಮಗೆ ಅದ್ಭುತ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಆರ್ಸಬಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಆ್ಯಂಡಿ ಫ್ಲವರ್ಗೆ ಈಗಾಗಲೇ ಐಪಿಎಲ್ನಲ್ಲಿ ಕೆಲಸ ಮಾಡಿದ ಅನುಭವವಿದ್ದು, ಫ್ಲವರ್ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಆರ್ಸಿಬಿ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿರುವ ಫ್ಲವರ್, ‘ಆರ್‌ಸಿಬಿಗೆ ಸೇರುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಇಬ್ಬರು ಕೋಚ್‌ಗಳಾದ ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ ಮತ್ತು ಆರ್‌ಸಿಬಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Sat, 5 August 23