ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸದ್ಯ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದಾರೆ. ಇಂಗ್ಲೆಂಡ್ ಪ್ರವಾಸ ಮುಗಿಸಿ ಟೀಮ್ ಇಂಡಿಯಾ ಜೊತೆ ವೆಸ್ಟ್ ಇಂಡೀಸ್ ಸರಣಿಗೆ ತೆರಳಿರಲಿಲ್ಲ. ಬದಲಾಗಿ ವಿಶ್ರಾಂತಿ ಪಡೆದಿದ್ದಾರೆ. ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಭಾರತದ ಅನುಭವಿ ಬ್ಯಾಟ್ಸ್‌ಮನ್ ಈಗ ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ 2022 ರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ . ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದ್ದು, ಇತ್ತೀಚಿನ ಫಾರ್ಮ್ ಗಮನದಲ್ಲಿಟ್ಟುಕೊಂಡು ಕೊಹ್ಲಿಯನ್ನು ಈ ಮಾದರಿಯಿಂದ ಕೈಬಿಡಬೇಕು ಎಂಬ ಆಗ್ರಹಗಳು ಕೂಡ ವ್ಯಕ್ತವಾಗಿದೆ. ಇವೆಲ್ಲವೂ ಕೊಹ್ಲಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುತ್ತಿಲ್ಲ ಎಂಬುದೇ ಸತ್ಯ. ಅಲ್ಲದೆ ಅವರ ಗುರಿಯಂತು ಸ್ಪಷ್ಟವಾಗಿದೆ.
ಭಾರತದ ಮಾಜಿ ನಾಯಕ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿರಬಹುದು, ಆದರೆ ಟೀಂ ಇಂಡಿಯಾ ಮತ್ತು ಒಟ್ಟಾರೆ ಕ್ರಿಕೆಟ್ ಆಟದ ಮೇಲಿನ ಅವರ ಉತ್ಸಾಹ ಕಡಿಮೆಯಾಗಿಲ್ಲ. ತಮ್ಮ ಕೆಟ್ಟ ಸಮಯದಲ್ಲೂ ತಮ್ಮ ಉತ್ಸಾಹವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಅವರ ಈ ಭಾವೋದ್ರೇಕವು ಅವರ ಗುರಿಯಲ್ಲಿ ಪ್ರತಿಫಲಿಸುತ್ತದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ.
ಹೌದು, ವಿರಾಟ್ ಕೊಹ್ಲಿಯ ಮುಂದಿನ ಗುರಿಗಳೇನು ಎಂಬುದನ್ನು ಕ್ರೀಡಾ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಟ್ವೀಟ್ ಮೂಲಕ ತಿಳಿಸಿದೆ. ವಿರಾಟ್ ಕೊಹ್ಲಿ ತಮ್ಮ ಮನದ ಮಾತುಗಳನ್ನು ಅವರ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಕೊಹ್ಲಿ ತಮ್ಮ ಗುರಿಯನ್ನು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು.
ಏಷ್ಯಾಕಪ್ ಮತ್ತು ವಿಶ್ವಕಪ್ ಗೆಲ್ಲಲು ಭಾರತಕ್ಕೆ ನೆರವಾಗುವುದು ನನ್ನ ಮುಖ್ಯ ಗುರಿಯಾಗಿದೆ. ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಭಾರತಕ್ಕೆ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದು ಕೊಡುವ ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ.
ನಿಸ್ಸಂಶಯವಾಗಿ ಕೊಹ್ಲಿಯ ಈ ಹೇಳಿಕೆಯು ಅವರ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಲಿದೆ. ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಅನ್ನೋದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಆದಾಗ್ಯೂ, ಅವರು ಏಷ್ಯಾ ಕಪ್‌ಗೆ ಆಯ್ಕೆಯಾಗುವುದು ಖಚಿತವಾಗಿದೆ. ಬಹುಶಃ ಈ ಪಂದ್ಯಾವಳಿಯಲ್ಲಿ ಅವರ ಪ್ರದರ್ಶನವು ವಿಶ್ವಕಪ್ ತಂಡದಲ್ಲಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಕೊಹ್ಲಿ ಈ ಟೂರ್ನಿಯ ಮೂಲಕ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಈ ಬಾರಿಯ ಏಷ್ಯಾ ಕಪ್ ಆಗಸ್ಟ್ 27 ರಿಂದ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿಯು, ಲಂಕಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಶಿಫ್ಟ್ ಆಗಿದೆ. ಈ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ತಮ್ಮ ಹಳೆಯ ಖದರ್ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.
Published On - 11:25 am, Sun, 24 July 22