
2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದ ಟೀಂ ಇಂಡಿಯಾ (IND vs NZ), 2013 ರ ಬಳಿಕ ಈ ಟ್ರೋಫಿ ಗೆದ್ದ ದಾಖಲೆ ಬರೆದಿತ್ತು. ಇದೀಗ ಇಡೀ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೀಕ್ಷಣೆಯ ವಿಚಾರದಲ್ಲಿ ದಾಖಲೆ ಬರೆದಿದ್ದು, ಇದುವರೆಗೆ ನಡೆದಿರುವ ಐಸಿಸಿ (ICC) ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯಾವಳಿ ಎಂಬ ಹೊಸ ದಾಖಲೆ ಬರೆದಿದೆ.
2025ರ ಚಾಂಪಿಯನ್ಸ್ ಟ್ರೋಫಿ ಬರೋಬ್ಬರಿ 368 ಬಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆ ಕಂಡಿದೆ. ಇದು 2017ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ವೀಕ್ಷಣೆಗಿಂತ ಶೇಕಡಾ 19 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡ ಆಗಿದೆ. ಇದಲ್ಲದೆ, ಈ ಟೂರ್ನಿ ಪ್ರತಿ ಓವರ್‌ಗೆ 308ಮಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆ ಪಡೆಯುವ ಮೂಲಕ ಐಸಿಸಿ ಈವೆಂಟ್ವೊಂದು ಅತ್ಯಧಿಕ ವೀಕ್ಷಣೆ ಪಡೆದ ದಾಖಲೆಯನ್ನು ಬರೆದಿದೆ.
Great to confirm #ChampionsTrophy 2025 was the most-watched ever version of the event with 368B global viewing minutes, up 19% on 2017. The India-New Zealand Final’s 65.3B global live viewing minutes also broke a mark set at the 2017 Final by 52.1% https://t.co/CC6JmuVikd pic.twitter.com/5uLE8EDSXr
— Jay Shah (@JayShah) May 21, 2025
ಹಾಗೆಯೇ ದುಬೈನಲ್ಲಿ ಮಾರ್ಚ್ 9 ರಂದು ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ವಿಶ್ವದಾದ್ಯಂತ 65.3 ಬಿಲಿಯನ್ ನಿಮಿಷಗಳ ಲೈವ್ ವೀಕ್ಷಣೆ ಕಂಡಿದ್ದು, ಈ ಮೂಲಕ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎನಿಸಿಕೊಂಡಿದೆ. ಇದರೊಂದಿಗೆ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನಿರ್ಮಿಸಲಾದ ದಾಖಲೆಯನ್ನು ಸಹ ಮುರಿದಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ICC Annual Rankings: ಐಸಿಸಿ ವಾರ್ಷಿಕ ರ‍್ಯಾಂಕಿಂಗ್ ಪಟ್ಟಿಯಲ್ಲೂ ಭಾರತದ್ದೇ ಪಾರುಪತ್ಯ
2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 7 ವಿಕೆಟ್‌ಗಳ ನಷ್ಟಕ್ಕೆ 251 ರನ್ ಗಳಿಸಿ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡವು ಒಂದು ಓವರ್ ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸುವ ಮೂಲಕ ಗುರಿಯನ್ನು ಬೆನ್ನಟ್ಟಿತು. ಈ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ, ಭಾರತ ತಂಡವು 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ದಾಖಲೆ ಬರೆಯಿತು. ಈ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ್ದ ರೋಹಿತ್ ಶರ್ಮಾ 83 ಎಸೆತಗಳಲ್ಲಿ 76 ರನ್ ಬಾರಿಸಿದ್ದರು. ಹಾಗೆಯೇ ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Wed, 21 May 25