Saud Shakeel
ಗಾಲೆಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡದ ಯುವ ದಾಂಡಿಗ ಸೌದ್ ಶಕೀಲ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
- ಈ ಡಬಲ್ ಸೆಂಚುರಿಯೊಂದಿಗೆ ಶ್ರೀಲಂಕಾದಲ್ಲಿ ದ್ವಿಶತಕ ಸಿಡಿಸಿದ ಮೊದಲ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಎಂಬ ದಾಖಲೆ ಸೌದ್ ಶಕೀಲ್ ಪಾಲಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿ ಮೊಹಮ್ಮದ್ ಹಫೀಝ್ 196 ರನ್ಗಳಿಸಿದ್ದು ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿತ್ತು. ಇದೀಗ ಅಜೇಯ 208 ರನ್ ಬಾರಿಸಿ ಸೌದ್ ಶಕೀಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
- ಪಾಕಿಸ್ತಾನ್ ಪರ ಡಬಲ್ ಸೆಂಚುರಿ ಸಿಡಿಸಿದ 23ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೌದ್ ಶಕೀಲ್ ಪಾತ್ರರಾಗಿದ್ದಾರೆ.
- ಟೆಸ್ಟ್ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬರುತ್ತಿರುವ ಸೌದ್ ಶಕೀಲ್ ಮೊದಲ 11 ಟೆಸ್ಟ್ ಇನ್ನಿಂಗ್ಸ್‌ಗಳ ನಂತರ ಪಾಕಿಸ್ತಾನದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸದ್ಯ ಶಕೀಲ್ ಒಟ್ಟು 788 ರನ್ ಕಲೆಹಾಕಿದ್ದಾರೆ.
- ಮೊದಲ ವಿದೇಶಿ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿದ 2ನೇ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಸೌದ್ ಶಕೀಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1971 ರಲ್ಲಿ ಇಂಗ್ಲೆಂಡ್ ವಿರುದ್ಧ ಝಹೀರ್ ಅಬ್ಬಾಸ್ ದ್ವಿಶತಕ ಬಾರಿಸಿದ್ದರು. ಇದೀಗ ಸೌದ್ ಶಕೀಲ್ ಈ ವಿಶೇಷ ದಾಖಲೆ ಬರೆದ 2ನೇ ಪಾಕ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
- ಇನ್ನು ಮೊದಲ 6 ಟೆಸ್ಟ್ ಪಂದ್ಯಗಳಲ್ಲಿ 50+ ಸರಾಸರಿಯಲ್ಲಿ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಗೂ ಸೌದ್ ಶಕೀಲ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಈ ವಿಶೇಷ ಸಾಧನೆ ಮಾಡಿದ ಆಟಗಾರರೆಂದರೆ ಸುನಿಲ್ ಗವಾಸ್ಕರ್, ಬೇಸಿಲ್ ಬುಚರ್, ಸಯೀದ್ ಅಹ್ಮದ್ ಮತ್ತು ಬರ್ಟ್ ಸಟ್‌ಕ್ಲಿಫ್ ಮಾತ್ರ. ಇದೀಗ ಈ ಪಟ್ಟಿಗೆ ಐದನೇ ಬ್ಯಾಟರ್ ಆಗಿ ಸೌದ್ ಶಕೀಲ್ ಎಂಟ್ರಿ ಕೊಟ್ಟಿದ್ದಾರೆ.
ಅಂದಹಾಗೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಪರ 2 ವರ್ಷಗಳ ಮೂಡಿಬರುತ್ತಿರುವ ಮೊದಲ ದ್ವಿಶತಕ ಇದು. ಇದಕ್ಕೂ ಮುನ್ನ 2021 ರಲ್ಲಿ ಝಿಂಬಾಬ್ವೆ ವಿರುದ್ಧ ಅಬಿದ್ ಅಲಿ 215 ರನ್ ಬಾರಿಸಿದ್ದರು. ಇದೀಗ 2 ವರ್ಷಗಳ ಬಳಿಕ ಸೌದ್ ಶಕೀಲ್ ಪಾಕಿಸ್ತಾನ್ ಪರ ದ್ವಿಶತಕ ಬಾರಿಸಿ ಮಿಂಚಿದ್ದಾರೆ.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್ ನ್ಯೂಸ್
ಸೌದ್ ಶಕೀಲ್ ಅವರ ಈ ದ್ವಿಶತಕದ ನೆರವಿನಿಂದ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ 312 ರನ್ ಬಾರಿಸಿದ್ದ ಶ್ರೀಲಂಕಾ ತಂಡವು 149 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.