Saud Shakeel: ದ್ವಿಶತಕ ಸಿಡಿಸಿದ ಸೌದ್ ಶಕೀಲ್: ಬೃಹತ್ ಮೊತ್ತ ಪೇರಿಸಿದ ಪಾಕ್
Sri Lanka vs Pakistan, 1st Test: ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು 101 ರನ್ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Sri Lanka vs Pakistan, 1st Test: ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ಬ್ಯಾಟರ್ ಸೌದ್ ಶಕೀಲ್ (Saud Shakeel) ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ (122) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ನಲ್ಲಿ 312 ರನ್ ಕಲೆಹಾಕಿತ್ತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು 101 ರನ್ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಸೌದ್ ಶಕೀಲ್ ಹಾಗೂ ಅಘ ಸಲ್ಮಾನ್ ಶತಕದ ಜೊತೆಯಾಟವಾಡಿದರು. ಆದರೆ ಮೂರನೇ ದಿನದಾಟದ ಆರಂಭದಲ್ಲೇ ಅಘ ಸಲ್ಮಾನ್ (83) ವಿಕೆಟ್ ಪಡೆಯುವಲ್ಲಿ ರಮೇಶ್ ಮೆಂಡಿಸ್ ಯಶಸ್ವಿಯಾದರು.
ಆದರೆ ಮತ್ತೊಂದೆಡೆ ಬಂಡೆಯಂತೆ ನೆಲೆಯೂರಿದ್ದ ಸೌದ್ ಶಕೀಲ್ ಲಂಕಾ ಬೌಲರ್ಗಳ ತಂತ್ರಕ್ಕೆ ಬ್ಯಾಟ್ ಮೂಲಕವೇ ಪ್ರತಿತಂತ್ರ ಹೂಡಿದರು. ರಕ್ಷಣಾತ್ಮಕ ಆಟದೊಂದಿಗೆ ರನ್ಗಳಿಸುತ್ತಾ ಸಾಗಿದ ಸೌದ್ 352 ಎಸೆತಗಳಲ್ಲಿ 19 ಫೋರ್ಗಳೊಂದಿಗೆ ದ್ವಿಶತಕ ಪೂರೈಸಿದ್ದರು.
ಇತ್ತ ಸೌದ್ ಶಕೀಲ್ ಕ್ರೀಸ್ ಕಚ್ಚಿ ನಿಂತಿದ್ದರೆ ಅತ್ತ ಪಾಕಿಸ್ತಾನ್ ತಂಡದ ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಔಟ್ ಮಾಡುವಲ್ಲಿ ಲಂಕಾ ಬೌಲರ್ಗಳು ಯಶಸ್ವಿಯಾದರು. ಪರಿಣಾಮ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 461 ರನ್ಗಳಿಸಿ ಆಲೌಟ್ ಆಯಿತು.
ವಿಶೇಷ ಎಂದರೆ 361 ಎಸೆತಗಳನ್ನು ಎದುರಿಸಿದ್ದ ಸೌದ್ ಶಕೀಲ್ 208 ರನ್ಗಳಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ರಮೇಶ್ ಮೆಂಡಿಸ್ 136 ರನ್ ನೀಡಿ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಇನ್ನು ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ 149 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಈ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 14 ರನ್ಗಳಿಸಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಖ್, ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) , ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘ ಸಲ್ಮಾನ್ , ನೌಮಾನ್ ಅಲಿ , ಅಬ್ರಾರ್ ಅಹ್ಮದ್ , ಶಾಹೀನ್ ಅಫ್ರಿದಿ , ನಸೀಮ್ ಶಾ.
ಇದನ್ನೂ ಓದಿ: Zimbabwe: ಝಿಂಬಾಬ್ವೆ ಅಬ್ಬರಕ್ಕೆ ಪಾಕಿಸ್ತಾನ್ ದಾಖಲೆ ಧೂಳೀಪಟ
ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ (ನಾಯಕ) , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ , ದಿನೇಶ್ ಚಂಡಿಮಲ್ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ವಿಶ್ವ ಫೆರ್ನಾಂಡೋ , ಕಸುನ್ ರಜಿತ.
Published On - 6:11 pm, Tue, 18 July 23