ರೆಡ್ ಕಾರ್ಡ್​ ರೂಲ್ಸ್​: ಕ್ರಿಕೆಟ್ ಅಂಗಳದಲ್ಲಿ ಹೊಸ ನಿಯಮ

| Updated By: ಝಾಹಿರ್ ಯೂಸುಫ್

Updated on: Aug 13, 2023 | 4:09 PM

Red cards in cricket: ಈ ಹೊಸ ನಿಯಮ ಜಾರಿಯಾದರೆ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿದೆ. ಅದರಲ್ಲೂ ಪೆನಾಲ್ಟಿ ರನ್, ಫೀಲ್ಡರ್​ ಕಡಿತ...ಇಡೀ ಪಂದ್ಯದ ಗತಿಯನ್ನೇ ಬದಲಿಸಬಹುದು. ಹೀಗಾಗಿಯೇ ರೆಡ್ ಕಾರ್ಡ್ ನಿಯಮ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೆಡ್ ಕಾರ್ಡ್​ ರೂಲ್ಸ್​: ಕ್ರಿಕೆಟ್ ಅಂಗಳದಲ್ಲಿ ಹೊಸ ನಿಯಮ
Red cards in cricket
Follow us on

ಸಾಮಾನ್ಯವಾಗಿ ಫುಟ್​ಬಾಲ್ ಅಂಗಳದಲ್ಲಿ ಕಂಡು ಬರುವ ರೆಡ್ ಕಾರ್ಡ್​ ನಿಯಮವನ್ನು ಕ್ರಿಕೆಟ್​ನಲ್ಲಿ ಪರಿಚಯಿಸಲಾಗುತ್ತಿದೆ. ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL 2023) ರೆಡ್ ಕಾರ್ಡ್ ನಿಯಮ ಜಾರಿಗೆ ಬರಲಿದ್ದು, ಇದರಿಂದ ಪಂದ್ಯವು ಮತ್ತಷ್ಟು ರೋಚಕವಾಗಲಿದೆ. ಈ ನಿಯಮದ ಪ್ರಕಾರ ಸ್ಲೋ ಓವರ್​ ರೇಟ್​ಗಾಗಿ ಫೀಲ್ಡಿಂಗ್ ತಂಡ ಓರ್ವ ಫೀಲ್ಡರ್​ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ಕೂಡ ಬೀಳಬಹುದು. ಹಾಗಿದ್ರೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಂಡು ಬರಲಿರುವ ರೆಡ್ ಕಾರ್ಡ್​ ನಿಯಮಗಳೇನು ಎಂದು ನೋಡೋಣ…

  • ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿಯಮದಂತೆ ಸಿಪಿಎಲ್​ನಲ್ಲೂ ಒಂದು ಇನಿಂಗ್ಸ್​ಗೆ 85 ನಿಮಿಷಗಳನ್ನು ನಿಗದಿ ಮಾಡಲಾಗಿದೆ.
  • ಇಲ್ಲಿ ಬೌಲಿಂಗ್ ತಂಡವು 17ನೇ ಓವರ್ ಅನ್ನು 72 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಮುಗಿಸಬೇಕಾಗಿದೆ. ಈ ಸಮಯದೊಳಗೆ 17 ಓವರ್ ಮುಗಿಸಲು ವಿಫಲವಾದರೆ ಬೌಂಡರಿ ಲೈನ್​ನಿಂದ ಓರ್ವ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ.
  • ಇನ್ನು 18ನೇ ಓವರ್ ಅನ್ನು 76 ನಿಮಿಷಗಳು ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 18 ಓವರ್​ ಮುಗಿಸಲು ಸಾಧ್ಯವಾಗದಿದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್‌ಗಳನ್ನು ಕಡಿತಗೊಳಿಸಿ 30 ಯಾರ್ಡ್ ಸರ್ಕಲ್​ ಒಳಗೆ ನಿಲ್ಲಿಸಬೇಕಾಗುತ್ತದೆ.
  • 18ನೇ ಓವರ್‌ನ ಪ್ರಾರಂಭದಲ್ಲಿ ಅಗತ್ಯವಿರುವ ಓವರ್ ರೇಟ್ ಹಿಂದೆ ಇದ್ದರೆ, ಬೌಂಡರಿ ಲೈನ್​ನಿಂದ ಓರ್ವ ಆಟಗಾರ 30 ಯಾರ್ಡ್ ಸರ್ಕಲ್​ನಲ್ಲಿರಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 5 ಫೀಲ್ಡರ್ ಇರಬೇಕಾಗುತ್ತದೆ.
  • 19ನೇ ಓವರ್‌ನ ಪ್ರಾರಂಭದಲ್ಲಿ ಓವರ್​ ರೇಟ್​ನಲ್ಲಿ ಹಿಂದೆ ಇದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್​ಗಳು 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 6 ಫೀಲ್ಡರ್​ಗಳಿರಬೇಕಾಗುತ್ತದೆ.​
  • 20ನೇ ಓವರ್‌ನ ಆರಂಭದ ವೇಳೆ ಓವರ್​ ರೇಟ್​ನಲ್ಲಿ ಹಿಂದೆ ಉಳಿದಿದ್ದರೆ, ಓರ್ವ ಫೀಲ್ಡರ್ ಮೈದಾನ ತೊರೆಯಬೇಕಾಗುತ್ತದೆ. ಅಂದರೆ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇಲ್ಲಿ ಯಾರು ಮೈದಾನದಿಂದ ಹೊರಬೇಕು ಎಂಬುದನ್ನು ನಾಯಕ ನಿರ್ಧರಿಸಲಿದ್ದಾನೆ.
  • ಇನ್ನು ಬ್ಯಾಟಿಂಗ್​ ತಂಡವು ಪಂದ್ಯವನ್ನು ನಿಧಾನಗೊಳಿಸಿದರೆ ರನ್​ಗಳ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್​ಗೆ ನಿಲ್ಲಲು ಅಥವಾ ಗ್ಲೌಸ್ ಮತ್ತು ಬ್ಯಾಟ್​ಗಳನ್ನು ಬದಲಿಸುವ ಮೂಲಕ ಪಂದ್ಯದ ಸಮಯವನ್ನು ವ್ಯರ್ಥ ಮಾಡಿದರೆ 5 ರನ್​​ಗಳ ಪೆನಾಲ್ಟಿ ಬೀಳಲಿದೆ.

ಈ ಎಲ್ಲಾ ಶಿಕ್ಷೆಯನ್ನು ವಿಧಿಸುವ ಮುನ್ನ ಅಂಪೈರ್​ ರೆಡ್ ಕಾರ್ಡ್ ಎಚ್ಚರಿಕೆಯನ್ನು ನೀಡಲಿದ್ದಾರೆ. ಈ ಮೂಲಕ ಕ್ರಿಕೆಟ್ ಅಂಗಳದಲ್ಲಿ ರೆಡ್ ಕಾರ್ಡ್​ ಬಳಕೆಯನ್ನು ಮಾಡಲು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಯೋಜಕರು ಮುಂದಾಗಿದ್ದಾರೆ.

ಇದನ್ನೂ ಓದಿ: CPL 2023: ಕೆರಿಬಿಯನ್ ಪ್ರೀಮಿಯರ್ ಲೀಗ್ 6 ತಂಡಗಳು ಪ್ರಕಟ

ಈ ಹೊಸ ನಿಯಮ ಜಾರಿಯಾದರೆ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿದೆ. ಅದರಲ್ಲೂ ಪೆನಾಲ್ಟಿ ರನ್, ಫೀಲ್ಡರ್​ ಕಡಿತ…ಇಡೀ ಪಂದ್ಯದ ಗತಿಯನ್ನೇ ಬದಲಿಸಬಹುದು. ಹೀಗಾಗಿಯೇ ರೆಡ್ ಕಾರ್ಡ್ ನಿಯಮ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.