Mohammed Shami: ಧರ್ಮ ನಿಂದನೆ, ಆತ್ಮಹತ್ಯೆ ಮತ್ತು 200 ವಿಕೆಟ್: ಮೊಹಮ್ಮದ್ ಶಮಿಯ ಪ್ರಾಮಾಣಿಕ ಪ್ರಯತ್ನ

| Updated By: ಝಾಹಿರ್ ಯೂಸುಫ್

Updated on: Dec 29, 2021 | 5:36 PM

India vs South Africa: ಟೀಮ್ ಇಂಡಿಯಾ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 200 ಟೆಸ್ಟ್​ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಮೊಹಮ್ಮದ್ ಶಮಿ ಪಾಲಾಗಿದೆ. ಈ ಹಿಂದೆ ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್​ ಕಬಳಿಸಿ ದಾಖಲೆ ಬರೆದಿದ್ದರು.

Mohammed Shami: ಧರ್ಮ ನಿಂದನೆ, ಆತ್ಮಹತ್ಯೆ ಮತ್ತು 200 ವಿಕೆಟ್: ಮೊಹಮ್ಮದ್ ಶಮಿಯ ಪ್ರಾಮಾಣಿಕ ಪ್ರಯತ್ನ
Mohammed Shami
Follow us on

ಸಾಧಕರ ಸಾಧನೆಯ ಹಿಂದೆ ಸಾವಿರಾರು ಕಥೆಗಳಿರುತ್ತವೆ. ಅಂತಹ ಸಾಧಕರ ಪಟ್ಟಿಗೆ ಹೊಸ ಸೇರ್ಪಡೆ ಮೊಹಮ್ಮದ್ ಶಮಿ (Mohammed Shami). ಕೆಲ ತಿಂಗಳ ಹಿಂದೆಯಷ್ಟೇ ಮೊಹಮ್ಮದ್ ಶಮಿ ಅವರ ಕ್ರಿಕೆಟ್ ಕೆರಿಯರ್ ಖತಂ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಒಂದು ಕಾರಣ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ದದ ಕಳಪೆ ಪ್ರದರ್ಶನ. ಇದರ ಬೆನ್ನಲ್ಲೇ ಶಮಿ ವಿರುದ್ದ ನಿಂದನೆಗಳೂ ಕೂಡ ಕೇಳಿ ಬಂದವು. ಅದರಲ್ಲೂ ಕೆಲ ಮಂದ ಬುದ್ದಿಗಳು ಭಾರತ ಬಿಟ್ಟು ತೊಲಗುವಂತೆ ಶಮಿಗೆ ತಾಕೀತು ಕೂಡ ಮಾಡಿದ್ದರು. ಒಂದೇ ಒಂದು ಪಂದ್ಯವು ಶಮಿ ಅವರ ಕ್ರಿಕೆಟ್ ಜರ್ನಿಯನ್ನೇ ಪ್ರಶ್ನಿಸುವಂತೆ ಮಾಡಿತ್ತು. ಅದರಲ್ಲೂ ಕ್ರಿಕೆಟ್ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರೂ ಕೂಡ ಕೇವಲ 4 ಓವರ್​ ನೋಡಿ ಶಮಿಯನ್ನು ಪ್ರಶ್ನಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಿಂದನೆ, ಅವಮಾನಗಳು ಬೌನ್ಸರ್​ನಂತೆ ತೂರಿ ಬರುತ್ತಿದ್ದರೆ, ಅದಕ್ಕೆ ಎದೆಯೊಡ್ಡಿ ನಿಂತಿದ್ದು ಮತ್ಯಾರೂ ಅಲ್ಲ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಬಹಿರಂಗವಾಗಿಯೇ ಶಮಿಗೆ ವಿರಾಟ್ ಕೊಹ್ಲಿ ಬೆಂಬಲ ಸೂಚಿಸಿದರು. ಕಿಡಿಗೇಡಿಗಳ ವಿರುದ್ದ ಕೊಹ್ಲಿ ಹೌಹಾರಿದರು. ಸಮರ್ಥ ನಾಯಕನ ಬೆಂಬಲ, ಕಠಿಣ ಪರಿಶ್ರಮ…ಇದೀಗ ಮೊಹಮ್ಮದ್ ಶಮಿಯನ್ನು ಮತ್ತೆ ಟ್ರಾಕ್​ಗೆ ಮರಳಿಸಿದೆ.

ಮಂಗಳವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಉರುಳಿಸಿದ್ದರು. ಈ ಮೂಲಕ 200 ಟೆಸ್ಟ್ ವಿಕೆಟ್‌ಗಳನ್ನು ಐದನೇ ಭಾರತೀಯ ವೇಗದ ಬೌಲರ್ ಎಂಬ ದಾಖಲೆಯನ್ನು ಶಮಿ ಬರೆದಿದ್ದಾರೆ. ಕೇವಲ 44 ರನ್​ ನೀಡಿ  ಐದು ವಿಕೆಟ್ ಉರುಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಸಾಲು ಸಾಲಾಗಿ ಶಮಿ ಪೆವಿಲಿಯನ್​ಗೆ ಕಳುಹಿಸಿದ್ದರು. ಇದೀಗ ಶಮಿ ಸಾಧನೆಯ ಉತ್ತುಂಗದಲ್ಲಿದ್ದಾರೆ. ಆದರೆ ಶಮಿಯ ಪಾಲಿಗೆ ಸಾಧನೆ ಮತ್ತು ವಿವಾದ ಇಂದು ನಿನ್ನೆಯದಲ್ಲ ಎಂಬುದು ವಿಶೇಷ.

ಏಕೆಂದರೆ ಶಮಿ ವೈಯಕ್ತಿಕ ಜೀವನ ಮತ್ತು ಕ್ರಿಕೆಟ್‌ನಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ಗಾಯಗಳು ಅವರನ್ನು ನಿವೃತ್ತಿಯ ಅಂಚಿಗೂ ಕೂಡ ತಳ್ಳಿದ್ದವು. ಕಳೆದ ವರ್ಷ, ರೋಹಿತ್ ಶರ್ಮಾ ಅವರೊಂದಿಗಿನ ಇನ್‌ಸ್ಟಾಗ್ರಾಮ್ ಲೈವ್​ನಲ್ಲಿ , ಶಮಿ ಮನಬಿಚ್ಚಿ ಮಾತನಾಡಿದ್ದರು. ಈ ವೇಳೆ “ತೀವ್ರ ಒತ್ತಡ ಮತ್ತು ವೈಯಕ್ತಿಕ ಸಮಸ್ಯೆಗಳ” ಅವಧಿಯಲ್ಲಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದರು. ಇಂತಹ ಹಲವು ಮಜಲುಗಳನ್ನು ದಾಟಿ ಬಂದಿದ್ದ ಶಮಿಗೆ, ನಿಂದಕರ ನಡುವೆ ಬೆಂಬಲ ಬೇಕಿತ್ತು. ಅದನ್ನು ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ನೀಡಿದ್ದರು.

ಆ ಬೆಂಬಲದ ಪ್ರತಿಫಲವಾಗಿ ಇದೀಗ ಸೌತ್ ಆಫ್ರಿಕಾದಲ್ಲಿ ಅವರದ್ದೇ ಬೌಲರುಗಳು ನಾಚುವಂತೆ ಶಮಿ ದಾಳಿ ಸಂಘಟಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಮಿ, “ಆಧುನಿಕ ಕ್ರಿಕೆಟ್‌ನಲ್ಲಿ ವೇಗವು ಹೆಚ್ಚು ಮುಖ್ಯವಲ್ಲ. ನನ್ನ ಗಮನವು ಯಾವಾಗಲೂ ಸರಿಯಾದ ಟಾರ್ಗೆಟ್​ ಮೇಲೆ ಇರುತ್ತದೆ. ಇಂದು ಕೂಡ, ನಾನು ಸರಿಯಾದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದೇನೆ. ಟೆಸ್ಟ್ ಕ್ರಿಕೆಟ್ ರಾಕೆಟ್ ವಿಜ್ಞಾನವಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಆಡಲು ನೀವು ಪರಿಸ್ಥಿತಿಗಳನ್ನು ತಿಳಿದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ನಿಮ್ಮ ಲೈನ್ ಅ್ಯಂಡ್ ಲೆಂಗ್ತ್​ ಅನ್ನು ಸರಿಹೊಂದಿಸಬೇಕು. 2ನೇ ದಿನದಾಟದ ವೇಳೆ ಮಳೆ ಸುರಿದಿದೆ. ಹೀಗಾಗಿ 3ನೇ ದಿನದಾಟ ಪಿಚ್ ವಿಭಿನ್ನವಾಗಿತ್ತು. ಇಂತಹ ಸಂದರ್ಭಗಳಲ್ಲಿ ಸರಿಯಾದ ಪ್ರದೇಶಗಳನ್ನು ಗುರಿ ಮಾಡಿ ಲೈನ್​ ಅ್ಯಂಡ್ ಲೆಂಗ್ತ್​ ಅನ್ನು ನಿಯಂತ್ರಿಸುವುದು ಕಡ್ಡಾಯವಾಗಿದೆ. ಅದನ್ನು ಸರಿಯಾಗಿ ಮಾಡಿದ ಪರಿಣಾಮ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಪಶ್ಚಿಮ ಬಂಗಾಳ ಪರ ರಣಜಿ ಆಡುವ ಮೊಹಮ್ಮದ್ ಶಮಿ ಮೂಲತಃ ಉತ್ತರ ಪ್ರದೇಶದವರು. ತಮ್ಮ ಕ್ರಿಕೆಟ್ ಕೆರಿಯರ್​ ಅನ್ನು ಕೂಡ ಆರಂಭಿಸಿದ್ದು ಯುಪಿಯಲ್ಲಿ ಎಂಬುದು ವಿಶೇಷ. ಕ್ರಿಕೆಟ್ ಕೆರಿಯರ್​ನ ತಮ್ಮ ಜರ್ನಿಯನ್ನು ಹಂಚಿಕೊಂಡಿರುವ ಶಮಿ, ಒಂದು ದಶಕದ ಹಿಂದೆ, ನಾನು ಕೋಲ್ಕತ್ತಾದಲ್ಲಿ ಕ್ಲಬ್ ಕ್ರಿಕೆಟ್‌ನಲ್ಲಿ ಪ್ರಯಾಣವನ್ನು ಪ್ರಾರಂಭಿಸಿದಾಗ, 200 ಟೆಸ್ಟ್ ವಿಕೆಟ್​ ಪಡೆಯುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.

ನೀವು ಬಾಲ್ಯದಲ್ಲಿ ಕ್ರಿಕೆಟ್ ಆಡುವಾಗ, ಅದಕ್ಕಾಗಿ ಶ್ರಮಿಸುವಾಗ, ನಿಮ್ಮಲ್ಲೆರ ಏಕೈಕ ಕನಸು ಭಾರತಕ್ಕಾಗಿ ಆಡುವುದು ಆಗಿರುತ್ತದೆ. ಅದರಲ್ಲೂ ನೀವು ಟಿವಿಯಲ್ಲಿ ನೋಡುವ ಮತ್ತು ಆರಾಧಿಸುವವರ ಜೊತೆಯಲ್ಲಿ ಆಡುವ ದೊಡ್ಡ ಕನಸು ಕಟ್ಟಿಕೊಂಡಿರುತ್ತೇವೆ. ನಾನು ಕೂಡ ಅಂತಹದ್ದೇ ಕನಸನ್ನು ಕಂಡಿದ್ದೆ. ಅಂತಹ ಗುರಿಯನ್ನು ಸಾಧಿಸಲು ನೀವು ಶ್ರಮಿಸುತ್ತೀರಿ. ನೀವು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದಾಗ, ಖಂಡಿತವಾಗಿಯೂ ಫಲಿತಾಂಶವನ್ನು ಪಡೆಯುತ್ತೀರಿ. ಅದಕ್ಕೆ ಉದಾಹರಣೆಯೇ ನಾನು ಎಂದು ಶಮಿ ಹೇಳಿದರು.

“ನಾನು ಇಂದಿಗೂ ಸೌಲಭ್ಯಗಳು ಸೀಮಿತವಾಗಿರುವ ಸ್ಥಳದಿಂದ (ಅಮ್ರೋಹಾ, ಉತ್ತರ ಪ್ರದೇಶ) ಬಂದಿದ್ದೇನೆ. ಪ್ರತಿದಿನ ನಾನು 30 ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ನನ್ನ ತಂದೆ ನನ್ನೊಂದಿಗೆ ಬರುತ್ತಿದ್ದರು. ಆದ್ದರಿಂದ ಇಂದು ನಾನು ಮಾಡಿರುವ ಎಲ್ಲಾ ಸಾಧನೆಗಳ ಕ್ರೆಡಿಟ್ ನನ್ನ ತಂದೆ ಮತ್ತು ನನ್ನ ಸಹೋದರನಿಗೆ ಸಲ್ಲುತ್ತದೆ” ಎಂದು ಶಮಿ ತಿಳಿಸಿದರು.

“ಇಂದು ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಬೌಲರುಗಳು ಯಶಸ್ಸು ಸಾಧಿಸುತ್ತಿದ್ದಾರೆ. ಇದು ನಮ್ಮ ಆಟಗಾರರು ಕಳೆದ ಆರು-ಏಳು ವರ್ಷಗಳಿಂದ ಮಾಡಿದ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಬೆಂಬಲಕ್ಕೆ ಸಹಾಯಕ ಸಿಬ್ಬಂದಿ ಇದ್ದಾರೆ. ಒಬ್ಬ ವ್ಯಕ್ತಿಯನ್ನೂ ಕೂಡ ಪ್ರತ್ಯೇಕಿಸಲು ಸಾಧ್ಯವಿಲ್ಲ. ಆದರೆ ನಿಜವಾದ ಕ್ರೆಡಿಟ್ ಶ್ರಮವಹಿಸಿದವನಿಗೆ ಹೋಗುತ್ತದೆ. ಕಷ್ಟಪಟ್ಟು ದುಡಿಯುವವನಿಗೆ ಶ್ರೇಯಸ್ಸು ಸಲ್ಲುತ್ತದೆ. ಹೀಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಖಂಡಿತವಾಗಿಯೂ ಫಲಿತಾಂಶ ಸಿಗುತ್ತದೆ” ಎಂದು ಮೊಹಮ್ಮದ್ ಶಮಿ ಹೇಳಿದರು.

ಅಂದಹಾಗೆ ಟೀಮ್ ಇಂಡಿಯಾ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 200 ಟೆಸ್ಟ್​ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಮೊಹಮ್ಮದ್ ಶಮಿ ಪಾಲಾಗಿದೆ. ಈ ಹಿಂದೆ ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್​ ಕಬಳಿಸಿ ದಾಖಲೆ ಬರೆದಿದ್ದರು. ಆದರೀಗ ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ 200 ವಿಕೆಟ್ ಉರುಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ 10 ಸಾವಿರ ಎಸೆತಗಳ ಒಳಗೆ 200 ವಿಕೆಟ್​ ಪಡೆದ ಭಾರತದ ಏಕೈಕ ಬೌಲರ್ ಎಂಬ ದಾಖಲೆಯನ್ನೂ ಕೂಡ ಮೊಹಮ್ಮದ್ ಶಮಿ ನಿರ್ಮಿಸಿದ್ದಾರೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(‘Result of honest effort’: Mohammed Shami after reaching 200 Test wickets)