IND vs WI: 6,6,6,6,6… ಅತೀ ವೇಗದ ಅರ್ಧಶತಕ; ವಿಶ್ವ ದಾಖಲೆ ಸರಿಗಟ್ಟಿದ ರಿಚಾ ಘೋಷ್

|

Updated on: Dec 19, 2024 | 9:43 PM

Richa Ghosh's Record-Breaking 50: ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ (18 ಎಸೆತಗಳಲ್ಲಿ) ಬಾರಿಸಿ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಭಾರತ ತಂಡವು 217 ರನ್ ಗಳಿಸಿ ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆಯ ಸ್ಕೋರ್ ಕೂಡ ಮಾಡಿದೆ.

IND vs WI: 6,6,6,6,6... ಅತೀ ವೇಗದ ಅರ್ಧಶತಕ; ವಿಶ್ವ ದಾಖಲೆ ಸರಿಗಟ್ಟಿದ ರಿಚಾ ಘೋಷ್
ರಿಚಾ ಘೋಷ್
Follow us on

ಭಾರತ ಮಹಿಳಾ ತಂಡದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ತಮ್ಮ ಅಬ್ಬರದ ಬ್ಯಾಟಿಂಗ್​ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈಗಾಗಲೇ ಹಲವು ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿರುವ ರಿಚಾ ಘೋಷ್ ಇದೀಗ ಇತಿಹಾಸ ಸೃಷ್ಟಿಸಿದ್ದಾರೆ. ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಸಿಕ್ಸರ್ ಬಾರಿಸುತ್ತಲೇ ರಿಚಾ ವೇಗದ ಅರ್ಧಶತಕದ ವಿಶ್ವದಾಖಲೆಯನ್ನೂ ಸರಿಗಟ್ಟಿದ್ದು ಅವರ ಇನ್ನಿಂಗ್ಸ್​ನ ವಿಶೇಷತೆಯಾಗಿತ್ತು. ರಿಚಾ ಅವರ ಅದ್ಭುತ ಇನ್ನಿಂಗ್ಸ್‌ನ ಹೊರತಾಗಿ, ಸ್ಮೃತಿ ಮಂಧಾನ ಅವರ ವಿಶ್ವದಾಖಲೆಯ ಅರ್ಧಶತಕದ ಆಧಾರದ ಮೇಲೆ, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 217 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ.

ಮೊದಲ ಎಸೆತದಲ್ಲಿ ಸಿಕ್ಸ್

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಿಚಾ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. 15ನೇ ಓವರ್​ನಲ್ಲಿ ಸ್ಮೃತಿ ಮಂಧಾನ ಔಟಾದ ಬಳಿಕ ಕ್ರೀಸ್​ಗೆ ಬಂದ ರಿಚಾ ಅದೇ ಓವರ್‌ನಲ್ಲಿ ತಾನು ಆಡಿದ ಮೊದಲ ಎಸೆತವನ್ನು ಲಾಂಗ್ ಆಫ್​ ಕಡೆಗೆ ಅದ್ಭುತ ಸಿಕ್ಸರ್ ಬಾರಿಸಿದರು.

18 ಎಸೆತಗಳಲ್ಲಿ ಅರ್ಧಶತಕ

ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ರಿಚಾ, ವೆಸ್ಟ್ ಇಂಡೀಸ್ ತಂಡದ ಪ್ರತಿ ಬೌಲರ್‌ಗಳನ್ನು ಕಾಡಿದರು. ಹೀಗಾಗಿ ಸ್ವಲ್ಪ ಸಮಯದೊಳಗೆ ರಿಚಾ 3 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ರಿಚಾ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ರಿಚಾ ಭಾರತದ ಪರ ಅತಿ ವೇಗದ ಅರ್ಧಶತಕ ಸಿಡಿಸದ್ದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಹಿಳಾ ಟಿ20ಯಲ್ಲಿ ಅತಿವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ರಿಚಾ ಅವರಿಗಿಂತ ಮೊದಲು, ನ್ಯೂಜಿಲೆಂಡ್‌ನ ಅನುಭವಿ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫೋಬೆ ಲಿಚ್‌ಫೀಲ್ಡ್ ಕೂಡ ತಲಾ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಟೀಂ ಇಂಡಿಯಾದ ದಾಖಲೆಯ ಸ್ಕೋರ್

20ನೇ ಓವರ್‌ನ ಐದನೇ ಎಸೆತದಲ್ಲಿ ರಿಚಾ ಔಟಾಗುವುದಕ್ಕೂ ಮೊದಲು ತಮ್ಮ ಇನ್ನಿಂಗ್ಸ್‌ನಲ್ಲಿ 21 ಎಸೆತಗಳನ್ನು ಎದುರಿಸಿ 54 ರನ್ ಗಳಿಸಿದರು. ಇದಲ್ಲದೆ ಯುವ ಬ್ಯಾಟರ್ ರಾಘ್ವಿ ಅವರೊಂದಿಗೆ ಕೇವಲ 32 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಜೊತೆಯಾಟವನ್ನು ಮಾಡಿದರು. ಇದರ ಆಧಾರದ ಮೇಲೆ, ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು 217 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಕಲೆಹಾಕಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಯುಎಇ ವಿರುದ್ಧ ಟೀಂ ಇಂಡಿಯಾ 201 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ