Richa Ghosh: ಥೇಟ್ ಧೋನಿ ರೀತಿ ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದ ಕೀಪರ್ ರಿಚಾ ಘೋಷ್: ವಿಡಿಯೋ ನೋಡಿ

|

Updated on: Feb 19, 2023 | 10:20 AM

India Women vs England Women, Womens T20 World Cup: ಮಹಿಳಾ ಟಿ20 ವಿಶ್ವಕಪ್​ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಚಾ ಘೋಷ್ ಕೇವಲ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ದಂಗಾಗಿಸಿದರು. ವಿಶೇಷ ಎಂದರೆ ಮಹೇಂದ್ರ ಸಿಂಗ್ ಧೋನಿ ಕೂಡ ಥೇಟ್ ಇದೇ ಮಾದರಿಯಲ್ಲಿ ಕ್ಯಾಚ್ ಹಿಡಿದಿದ್ದರು.

Richa Ghosh: ಥೇಟ್ ಧೋನಿ ರೀತಿ ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದ ಕೀಪರ್ ರಿಚಾ ಘೋಷ್: ವಿಡಿಯೋ ನೋಡಿ
MS Dhoni and Richa Ghosh
Follow us on

ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ (ICC Womens T20 World Cup) ಕುತೂಹಲದತ್ತ ಸಾಗುತ್ತಿದೆ. ಶನಿವಾರ ಇಂಗ್ಲೆಂಡ್ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಸೋತ ಪರಿಣಾಮ ಭಾರತ ಮಹಿಳಾ ತಂಡದ (India Women vs England Women) ಮುಂದಿನ ಹಾದಿ ದುರ್ಗಮವಾಗಿದೆ. ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾರ ಹರ್ಮನ್ ಪಡೆ ಇಂಗ್ಲೆಂಡ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಸೋಲು ಕಂಡಿತು. ಸ್ಮೃತಿ ಮಂದಾನ ಹಾಗೂ ರಿಚಾ ಘೋಷ್ (Richa Ghosh) ಗೆಲುವಿಗೆ ಹೋರಾಟ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೂ ಆಟಗಾರ್ತಿಯರು ಅಭಿಮಾನಿಗಳ ಮನ ಗೆದ್ದರು. ರೇಣುಕಾ ಸಿಂಗ್ 5 ವಿಕೆಟ್ ಕಿತ್ತು ಮಿಂಚಿದರೆ, ರಿಚಾ ಘೋಷ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್​ನಲ್ಲೂ ಮೋಡಿ ಮಾಡಿದರು.

ಪಂದ್ಯದ ಮೊದಲ ಓವರ್​ನ ರೇಣುಕಾ ಸಿಂಗ್ ಅವರ ಮೂರನೇ ಎಸೆತದಲ್ಲೇ ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್ ವಿಕೆಟ್ ಕೀಪರ್ ರಿಚಾಗೆ ಕ್ಯಾಚ್ ನೀಡಿ ಔಟಾದರು. ಘೋಷ್ ಹಿಡಿದ ಕ್ಯಾಚ್ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಬಲ ಭಾಗಕ್ಕೆ ಡೈವ್ ಬಿದ್ದು ಕೇವಲ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ದಂಗಾಗಿಸಿದರು. ವಿಶೇಷ ಎಂದರೆ 2019 ಐಸಿಸಿ ಏಕದಿನ ವಿಶ್ವಕಪ್​ನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಥೇಟ್ ಇದೇ ಮಾದರಿಯಲ್ಲಿ ಕ್ಯಾಚ್ ಹಿಡಿದಿದ್ದರು. ಇದೀಗ ಅಭಿಮಾನಿಗಳು ರಿಚಾ ಘೋಷ್ ಹಿಡಿದ ಕ್ಯಾಚನ್ನು ಧೋನಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Renuka Singh: ಬುಮ್ರಾ-ಅಶ್ವಿನ್ ಯಾರಿಗೂ ಸಾಧ್ಯವಾಗಿಲ್ಲ: ಟಿ20 ವಿಶ್ವಕಪ್​ನಲ್ಲಿ ಇತಿಹಾಸ ರಚಿಸಿದ ರೇಣುಕಾ ಸಿಂಗ್
IND vs AUS 2nd Test: ರೋಚಕತೆ ಸೃಷ್ಟಿಸಿದ ದ್ವಿತೀಯ ಟೆಸ್ಟ್: ಆಸೀಸ್ ಆಲೌಟ್​​ಗೆ ಭಾರತ ರಣತಂತ್ರ
IPL 2023: SRH ತಂಡದ ನಾಯಕನನ್ನು ಹೆಸರಿಸಿದ ಅಶ್ವಿನ್
T20 World Cup 2023: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಗೆ ಮೊದಲ ಸೋಲು

 

 

IPL 2023: ಮಹೇಂದ್ರ ಸಿಂಗ್​ ಧೋನಿ ನಿವೃತ್ತಿಗೆ ಡೇಟ್ ಫಿಕ್ಸ್​..!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ಗೆ ರೇಣುಕಾ ಸಿಂಗ್​ ಮೊದಲ ಓವರ್​ನಲ್ಲೇ ಪೆಟ್ಟು ನೀಡಿದರು. ಡೇನಿಯಲ್​ ವ್ಯಾಟ್​ರನ್ನು ಸೊನ್ನೆಗೆ ಔಟ್​ ಮಾಡಿದರು. ಇದಾದ ಬಳಿಕ 3 ನೇ ಓವರ್​ನಲ್ಲಿ ಅಲಿಸಿ ಕ್ಯಾಪ್ಸೆ ವಿಕೆಟ್​ ಕಿತ್ತು ಅದ್ಭುತ ಆರಂಭ ನೀಡಿದರು. ಇದಾದ ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆಗೆ ರೇಣುಕಾ ಪೆವಿಲಿಯನ್​ ದಾರಿ ತೋರಿಸಿದರು. 29 ರನ್​ಗೆ 3 ಕಳೆದುಕೊಂಡ ಆಂಗ್ಲ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು.

ಈ ವೇಳೆ ಮೈದಾನಕ್ಕಿಳಿದ ನ್ಯಾಟ್​ ಸ್ಕಿವರ್​ ಬರ್ನ್ಟ್​ ಅರ್ಧಶತಕ ಗಳಿಸಿದರು. 42 ಎಸೆತ ಎದುರಿಸಿದ ಸ್ಕಿವರ್​ 5 ಬೌಂಡರಿ ಬಾರಿಸಿದರು. ನಾಯಕಿ ಹೀತರ್​ ನೈಟ್​ 28, ಆ್ಯಮಿ ಜೋನಸ್​ 3 ಬೌಂಡರಿ, 2 ಸಿಕ್ಸರ್​ ಸಮೇತ ಮಿಂಚಿನ ಬ್ಯಾಟ್​ ಮಾಡಿ 40 ರನ್​ ಗಳಿಸಿದರು. ಮಧ್ಯಮ ಓವರ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್ ನಿಗದಿತ 20 ಓವರ್​​ಗಳಲ್ಲಿ ಇಂಗ್ಲೆಂಡ್​ 7 ವಿಕೆಟ್​ಗೆ 151 ರನ್​ಗಳ ಸ್ಪರ್ಧಾತ್ಮ ಮೊತ್ತ ಗಳಿಸಿತು.

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಭಾರತ ಬಿರುಸಿನ ಆರಂಭ ಪಡೆಯಲು ವಿಫ‌ಲವಾಯಿತು. ಸ್ಮೃತಿ ಮಂಧನಾ ಒಂದು ಕಡೆ ಕ್ರೀಸ್‌ ಕಚ್ಚಿ ಆಡಿ ಅರ್ಧಶತಕ (52) ಬಾರಿಸಿದರೂ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್ ನಿಲ್ಲಲಿಲ್ಲ. ಶಫಾಲಿ (8), ಜೆಮಿಮಾ (13), ಕೌರ್‌ (4) ಆಟ ಬೇಗನೇ ಮುಗಿಯಿತು. ರಿಚಾ ಘೋಷ್‌ ಆಗಮಿಸುವಾಗ ಓವರ್‌ಗೆ 12 ರನ್‌ ಬೇಕಾಗಿತ್ತು.

ರಿಚಾ ಗೆಲುವಿಗೆ ಹೋರಾಟ ನಡೆಸಿದರೂ ಅದು ಸಾಲಲಿಲ್ಲ. 34 ಎಸೆತಗಳಿಂದ 47 ರನ್‌ ಮಾಡಿ ಅಜೇಯರಾಗಿ ಉಳಿದರು (4 ಫೋರ್‌, 2 ಸಿಕ್ಸರ್‌). ಅಂತಿಮವಾಗಿ ಭಾರತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲುಂಡಿತು. ಭಾರತ ಮುಂದಿನ ಹಂತಕ್ಕೆ ತೇರ್ಗಡೆಯಾಗಬೇಕಾದರೆ ಸೋಮವಾರ ಐರ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯವನ್ನು ಗೆಲ್ಲಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Sun, 19 February 23