- Kannada News Photo gallery Cricket photos Renuka Singh Thakur is the first Indian pacer to take a five-wicket haul in the Women's T20 World Cup INDW vs ENGW
Renuka Singh: ಬುಮ್ರಾ-ಅಶ್ವಿನ್ ಯಾರಿಗೂ ಸಾಧ್ಯವಾಗಿಲ್ಲ: ಟಿ20 ವಿಶ್ವಕಪ್ನಲ್ಲಿ ಇತಿಹಾಸ ರಚಿಸಿದ ರೇಣುಕಾ ಸಿಂಗ್
Women's T20 World Cup, India vs England: 4 ಓವರ್ ಬೌಲಿಂಗ್ ಮಾಡಿದ ರೇಣುಕಾ ಸಿಂಗ್ ಕೇವಲ 15 ರನ್ ನೀಡಿ 5 ವಿಕೆಟ್ಗಳ ಗೊಂಚಲು ಪಡೆದರು. ಈ ಮೂಲಕ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಭಾರತದ ಪುರುಷ ಕ್ರಿಕೆಟಿಗರಿಂದ ಕೂಡ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
Updated on:Feb 19, 2023 | 9:19 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಕೆಬೆರಾದ ಸ್ಯಾಂಟ್ ಗೋರ್ಜ್ಸ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ಟೀಮ್ ಇಂಡಿಯಾ 11 ರನ್ಗಳಿಂದ ಸೋಲುಂಡಿತು. ಭಾರತ ಸೋತರೂ ಬೌಲರ್ ರೇಣುಕಾ ಸಿಂಗ್ ಠಾಕೂರ್ ಎಲ್ಲರ ಮನ ಗೆದ್ದರು.

4 ಓವರ್ ಬೌಲಿಂಗ್ ಮಾಡಿದ ರೇಣುಕಾ ಕೇವಲ 15 ರನ್ ನೀಡಿ 5 ವಿಕೆಟ್ಗಳ ಗೊಂಚಲು ಪಡೆದರು. ಈ ಮೂಲಕ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಭಾರತದ ಪುರುಷ ಕ್ರಿಕೆಟಿಗರಿಂದ ಕೂಡ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಮಹಿಳಾ ಟಿ20 ವಿಶ್ವಕಪ್ನಲ್ಲಿ 5 ವಿಕೆಟ್ ಪಡೆದ ಮೊದಲ ಭಾರತದ ವೇಗಿ ಹಾಗೂ ಒಟ್ಟಾರೆಯಾಗಿ ಎರಡನೇ ಭಾರತದ ಎರಡನೇ ಆಟಗಾರ್ತಿ ರೇಣುಕಾ ಆಗಿದ್ದಾರೆ. ಈ ಹಿಂದೆ 2009 ರಲ್ಲಿ ಸ್ಪಿನ್ನರ್ ಪ್ರಿಯಾಂಕ ರಾಯ್ 5 ವಿಕೆಟ್ ಕಿತ್ತಿದ್ದರು.

ಇದರ ಜೊತೆಗೆ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದ ರೇಣುಕಾ, ಈ ಮೂಲಕ ಪುರುಷರ ಅಥವಾ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ರನ್ ನೀಡಿ 5 ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ಪ್ಲೇಯರ್ ಎಂಬ ದಾಖಲೆ ಬರೆದಿದ್ದಾರೆ.

ಟಿ20 ವಿಶ್ವಕಪ್ನ ಪುರುಷರ ಸಾಲಿನಲ್ಲಿ ರವಿಚಂದ್ರನ್ ಅಶ್ವಿನ್ 11 ರನ್ ನೀಡಿ 4 ವಿಕೆಟ್ ಪಡೆದಿರುವುದು ಸಾಧನೆ ಆಗಿದೆ. ಇವರು 2014 ರಲ್ಲಿ ಈ ದಾಖಲೆ ಮಾಡಿದ್ದರು. ಆದರೀಗ ರೇಣುಕಾ ಟಿ20 ವಿಶ್ವಕಪ್ನಲ್ಲಿ ಎಲ್ಲ ಭಾರತೀಯ ಬೌಲರ್ಗಳ ದಾಖಲೆ ಅಳಿಸಿ ಹಾಕಿದ್ದಾರೆ.

ಇತ್ತೀಚೆಗಷ್ಟೆ ನಡೆದ ಮಹಿಳಾ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಸೇರಿದ್ದ ರೇಣುಕಾ ಈ ಪಂದ್ಯದಲ್ಲಿ ಬೆಂಕಿ ಚೆಂಡಿನಂತೆ ದಾಳಿ ಮಾಡಿದರು. ಅತ್ತ ಮಿಂಚಿನ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ, ರಿಚಾ ಘೋಷ್ ಅವರ ಅದ್ಭುತ ಪ್ರದರ್ಶನ ಹೊರತಾಗಿಯೂ ಭಾರತ ವನಿತೆಯರು ಇಂಗ್ಲೆಂಡ್ ಮಹಿಳೆಯರ ವಿರುದ್ಧ ಸೋಲು ಕಂಡಿತು. ಇದು ಈ ಟೂರ್ನಿಯಲ್ಲಿ ಭಾರತದ ಮೊದಲು ಸೋಲು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ರೇಣುಕಾ ಸಿಂಗ್ ಮೊದಲ ಓವರ್ನಲ್ಲೇ ಪೆಟ್ಟು ನೀಡಿದರು. ಡೇನಿಯಲ್ ವ್ಯಾಟ್ರನ್ನು ಸೊನ್ನೆಗೆ ಔಟ್ ಮಾಡಿದರು. ಇದಾದ ಬಳಿಕ 3 ನೇ ಓವರ್ನಲ್ಲಿ ಅಲಿಸಿ ಕ್ಯಾಪ್ಸೆ ವಿಕೆಟ್ ಕಿತ್ತು ಅದ್ಭುತ ಆರಂಭ ನೀಡಿದರು.

ಇದಾದ ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆಗೆ ರೇಣುಕಾ ಪೆವಿಲಿಯನ್ ದಾರಿ ತೋರಿಸಿದರು. 29 ರನ್ಗೆ 3 ಕಳೆದುಕೊಂಡ ಆಂಗ್ಲ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಮೈದಾನಕ್ಕಿಳಿದ ನ್ಯಾಟ್ ಸ್ಕಿವರ್ ಬರ್ನ್ಟ್ ಅರ್ಧಶತಕ ಗಳಿಸಿದರು. 42 ಎಸೆತ ಎದುರಿಸಿದ ಸ್ಕಿವರ್ 5 ಬೌಂಡರಿ ಬಾರಿಸಿದರು.

ನಾಯಕಿ ಹೀತರ್ ನೈಟ್ 28, ಆ್ಯಮಿ ಜೋನಸ್ 3 ಬೌಂಡರಿ, 2 ಸಿಕ್ಸರ್ ಸಮೇತ ಮಿಂಚಿನ ಬ್ಯಾಟ್ ಮಾಡಿ 40 ರನ್ ಗಳಿಸಿದರು. ಮಧ್ಯಮ ಓವರ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್ ನಿಗದಿತ 20 ಓವರ್ಗಳಲ್ಲಿ ಇಂಗ್ಲೆಂಡ್ 7 ವಿಕೆಟ್ಗೆ 151 ರನ್ಗಳ ಸ್ಪರ್ಧಾತ್ಮ ಮೊತ್ತ ಗಳಿಸಿತು.

ದೊಡ್ಡ ಮೊತ್ತದ ಚೇಸಿಂಗ್ ವೇಳೆ ಭಾರತ ಬಿರುಸಿನ ಆರಂಭ ಪಡೆಯಲು ವಿಫಲವಾಯಿತು. ಸ್ಮೃತಿ ಮಂಧನಾ ಒಂದು ಕಡೆ ಕ್ರೀಸ್ ಕಚ್ಚಿ ಆಡಿ ಅರ್ಧಶತಕ (52) ಬಾರಿಸಿದರೂ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್ ನಿಲ್ಲಲಿಲ್ಲ. ಶಫಾಲಿ (8), ಜೆಮಿಮಾ (13), ಕೌರ್ (4) ಆಟ ಬೇಗನೇ ಮುಗಿಯಿತು. ರಿಚಾ ಘೋಷ್ ಆಗಮಿಸುವಾಗ ಓವರ್‌ಗೆ 12 ರನ್ ಬೇಕಾಗಿತ್ತು.

ರಿಚಾ ಗೆಲುವಿಗೆ ಹೋರಾಟ ನಡೆಸಿದರೂ ಅದು ಸಾಲಲಿಲ್ಲ. 34 ಎಸೆತಗಳಿಂದ 47 ರನ್ ಮಾಡಿ ಅಜೇಯರಾಗಿ ಉಳಿದರು (4 ಫೋರ್, 2 ಸಿಕ್ಸರ್). ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲುಂಡಿತು. ಭಾರತ ಮುಂದಿನ ಹಂತಕ್ಕೆ ತೇರ್ಗಡೆಯಾಗಬೇಕಾದರೆ ಸೋಮವಾರ ಐರ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯವನ್ನು ಗೆಲ್ಲಬೇಕಿದೆ.
Published On - 9:19 am, Sun, 19 February 23
























