ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. 1 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದು 62 ರನ್ಗಳ ಮುನ್ನಡೆಯಲ್ಲಿದೆ.
ಇಂದಿನ ಮೂರನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಕಾಂಗರೂ ಪಡೆಯನ್ನು ಆದಷ್ಟು ಬೇಗ ಆಲೌಟ್ ಮಾಡಿ ಅಲ್ಪ ಮೊತ್ತದ ಟಾರ್ಗೆಟ್ ಪಡೆಯುವ ಯೋಜನೆ ಭಾರತದ್ದು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 39 ರನ್ ಹಾಗೂ ಮಾರ್ನಸ್ ಲಾಬುಶೇನ್ 16 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 263 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾಗೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿತು. ರೋಹಿತ್ ಶರ್ಮಾ 32 ರನ್, ಉಪನಾಯಕ ಕೆಎಲ್ ರಾಹುಲ್ 17 ರನ್ಗೆ ನಿರ್ಗಮಿಸಿದರು.
100 ನೇ ಟೆಸ್ಟ್ ಆಡುತ್ತಿರುವ ಚೇತೇಶ್ವರ್ ಪೂಜಾರ 7 ಎಸೆತ ಎದುರಿಸಿ ಸೊನ್ನೆಗೆ ಔಟಾಗಿ ಕೆಟ್ಟ ದಾಖಲೆ ಬರೆದರು. ಶ್ರೇಯಸ್ 4 ರನ್, ವಿರಾಟ್ ಕೊಹ್ಲಿ 44 ರನ್, ರವೀಂದ್ರ ಜಡೇಜಾ 26 ರನ್, ಶ್ರೀಕರ್ ಭಟ್ 6 ರನ್ಗೆ ವಿಕೆಟ್ ನೀಡಿದರು.
ಭಾರತ 150 ರನ್ಗಳ ಒಳಗೆ ಏಳು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ 114 ರನ್ ಜೊತೆಯಾಟ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಭಾರತವನ್ನು ಮೇಲೆಳೆಯುವಂತೆ ಮಾಡಿತು. ಇದರಿಂದ ತಂಡ 250 ರನ್ ಗಡಿ ದಾಟಿತು.
ಬಿರುಸಾಗಿ ಬ್ಯಾಟ್ ಮಾಡಿದ ಅಕ್ಷರ್ 115 ಎಸೆತಗಳಲ್ಲಿ 9 ಬೌಂಡರಿ 32 ಸಿಕ್ಸರ್ ಸಮೇತ 74 ರನ್ ಸಿಡಿಸಿದರು. ಅಶ್ವಿನ್ 37 ರನ್ ಮಾಡಿ ಸಾಥ್ ನೀಡಿದರು. ಭಾರತ 83.3 ಓವರ್ಗಳಲ್ಲಿ 262 ರನ್ಗೆ ಇನಿಂಗ್ಸ್ ಮುಗಿಸಿತು. 1 ರನ್ ಹಿನ್ನಡೆ ಅನುಭವಿಸಿತು.
ಮೊದಲ ಟೆಸ್ಟ್ನಲ್ಲಿ ಭಾರತದ ಸ್ಪಿನ್ ದಾಳಿಗೆ ನುಚ್ಚುನೂರಾಗಿದ್ದ ಆಸ್ಟ್ರೇಲಿಯಾ ಅದೇ ತಂತ್ರ ಬಳಸಿ ಭಾರತವನ್ನು ಕಾಡಿತು. ತಂಡದ ಹಿರಿಯ ಸ್ಪಿನ್ನರ್ ನೇಥನ್ ಲಿಯಾನ್ 5 ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದರು.
Published On - 7:45 am, Sun, 19 February 23