
ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ಗೆ (Rinku Singh) ಉತ್ತರ ಪ್ರದೇಶ ಸರ್ಕಾರದಿಂದ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಸರ್ಕಾರಿ ಉದ್ಯೋಗ ಪಡೆಯುತ್ತಿರುವ ಭಾರತ ಮೊದಲ ಕ್ರಿಕೆಟಿಗ ರಿಂಕು ಸಿಂಗ್ ಅಲ್ಲ. ಸಚಿನ್ ತೆಂಡೂಲ್ಕರ್ (Sachin Tendulkar), ಎಂಎಸ್ ಧೋನಿ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಕ್ರಿಕೆಟಿಗರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಅವರಂತೆಯೇ ರಿಂಕು ಸಿಂಗ್ ಅವರಿಗೂ ಕ್ರಿಕೆಟ್ನಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಸರ್ಕಾರಿ ಉದ್ಯೋಗ ಲಭಿಸಿದೆ. ಉತ್ತರ ಪ್ರದೇಶ ಸರ್ಕಾರ ರಿಂಕು ಸಿಂಗ್ ಅವರ ಜೊತೆಗೆ ಇನ್ನೂ 6 ಕ್ರೀಡಾ ಸಾಧಕರಿಗೂ ಸರ್ಕಾರಿ ಉದ್ಯೋಗ ನೀಡಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಸರ್ಕಾರದ ಆಯ್ಕೆ ಸಮಿತಿಯು ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಏಳು ಆಟಗಾರರನ್ನು ನೇಮಿಸಲು ಶಿಫಾರಸು ಮಾಡಿತು, ಇದರಲ್ಲಿ ಕ್ರಿಕೆಟಿಗ ರಿಂಕು ಸಿಂಗ್ ಜೊತೆಗೆ ಇನ್ನೂ 6 ಆಟಗಾರರ ಹೆಸರುಗಳು ಸೇರಿವೆ. ಅಂತರರಾಷ್ಟ್ರೀಯ ಪದಕ ವಿಜೇತ ಆಟಗಾರರ ನೇರ ನೇಮಕಾತಿಯಡಿಯಲ್ಲಿ ಈ ಆಟಗಾರರನ್ನು ನೇಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ರಿಂಕು ಸಿಂಗ್ ಅವರನ್ನು ಶಿಕ್ಷಣ ಇಲಾಖೆಯಲ್ಲಿ ಮೂಲ ಶಿಕ್ಷಣ ಅಧಿಕಾರಿಯಾಗಿ ನೇಮಿಸಲಾಗಿದೆ. ಈಗ ಪ್ರಶ್ನೆ ಏನೆಂದರೆ ಅವರನ್ನು ಹೊರತುಪಡಿಸಿ ಉಳಿದ 6 ಕ್ರೀಡಾಪಟುಗಳು ಯಾರು? ಮತ್ತು, ಅವರಿಗೆ ಯಾವ ಇಲಾಖೆಯಲ್ಲಿ ಹುದ್ದೆ ನೀಡಲಾಗಿದೆ? ಎಂಬುದು. ವಾಸ್ತವವಾಗಿ ರಿಂಕು ಅಲ್ಲದೆ ಇತರ 6 ಕ್ರೀಡಾಪಟುಗಳಲ್ಲಿ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರ ಹೆಸರಿದೆ, ಅವರನ್ನು ಗೃಹ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಂದರೆ ಉಪ ಎಸ್‌ಪಿಯಾಗಿ ನೇಮಿಸಲಾಗಿದೆ. ಅವರಲ್ಲದೆ, ಹಾಕಿ ಆಟಗಾರ ರಾಜ್‌ಕುಮಾರ್ ಪಾಲ್ ಅವರನ್ನು ಗೃಹ ಇಲಾಖೆಯಲ್ಲಿ ಉಪ ಎಸ್‌ಪಿ ಹುದ್ದೆಗೆ ನೇಮಿಸಲಾಗುವುದು.
ಪ್ಯಾರಾ ಅಥ್ಲೀಟ್‌ಗಳಾದ ಅಜಿತ್ ಸಿಂಗ್ ಮತ್ತು ಸಿಮ್ರಾನ್ ಪಂಚಾಯತ್ ರಾಜ್ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಪ್ಯಾರಾ ಅಥ್ಲೀಟ್ ಪ್ರೀತಿ ಪಾಲ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬ್ಲಾಕ್ ಅಭಿವೃದ್ಧಿ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಅಥ್ಲೀಟ್ ಕಿರಣ್ ಬಲಿಯಾನ್ ಅವರನ್ನು ಅರಣ್ಯ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು, ಅಲ್ಲಿ ಅವರು ಪ್ರಾದೇಶಿಕ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
8ನೇ ಕ್ಲಾಸ್ ಓದಿರುವ ರಿಂಕು ಸಿಂಗ್ಗೆ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರಿ; ಯಾವ ಹುದ್ದೆ ಗೊತ್ತಾ?
ಕ್ರೀಡಾಸಾಧಕರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ಪಡೆಯಲಾಗುವುದು. ನೇಮಕಾತಿಯ ನಂತರ, ಅವರು ಏಳು ವರ್ಷಗಳ ಒಳಗೆ ಸಂಬಂಧಪಟ್ಟ ಇಲಾಖೆಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಮಾಡದಿದ್ದರೆ, ಅವರು ಬಡ್ತಿಗೆ ಅರ್ಹರಾಗಿರುವುದಿಲ್ಲ.
ಪ್ರಸ್ತುತ, ಈ ಆಟಗಾರರ ನೇಮಕಾತಿಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಇಲಾಖೆ ಪ್ರಾರಂಭಿಸಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಲು ರಿಂಕು ಸಿಂಗ್ ಅವರಿಗೆ ಪತ್ರ ಕಳುಹಿಸಲಾಗಿದೆ. ಅವರಿಗೆ ಮಾತ್ರವಲ್ಲದೆ ಇತರ 6 ಕ್ರೀಡಾಪಟುಗಳಿಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಪತ್ರ ಕಳುಹಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ