
ಸಾಮಾನ್ಯವಾಗಿ ರಕ್ಷಾಬಂಧನ ದಿನದಂದು (Raksha Bandhan) ಸಹೋದರಿಯರು ತನ್ನ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಂಕು ಸಿಂಗ್ (Rinku Singh) ತಮ್ಮ ಜೀವನವನ್ನು ಬದಲಿಸಿದ ಬ್ಯಾಟ್‌ಗೆ ರಾಖಿ ಕಟ್ಟಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಿಂಕು ಅವರ ಈ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ರಿಂಕು ಸಿಂಗ್ ಅನೇಕ ಪ್ರಮುಖ ಸಂದರ್ಭಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಇದರ ಹೊರತಾಗಿ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದೇ ಐಪಿಎಲ್‌ನಲ್ಲಿ 5 ಎಸೆತಗಳಲ್ಲಿ ಐದು ಸಿಕ್ಸರ್ ಬಾರಿಸಿ ರಾತ್ರೋ ರಾತ್ರಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ರಿಂಕು, ಆ ಐದು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ ಮೇಲಿನ ತಮ್ಮ ಪ್ರೀತಿಯನ್ನು ರಾಖಿ ಕಟ್ಟು ಮೂಲಕ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ರಿಂಕು ಸಿಂಗ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. 2017 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರುವ ಮೂಲಕ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ ರಿಂಕುಗೆ ಆ ಆವೃತ್ತಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ. ಆ ಬಳಿಕ 2018 ರಲ್ಲಿ ಕೆಕೆಆರ್ ತಂಡವನ್ನು ಸೇರಿಕಂಡ ರಿಂಕು ಇದೀಗ ಆ ತಂಡದ ಬ್ಯಾಟಿಂಗ್ ಜೀವಾಳವಾಗಿದ್ದಾರೆ. ಇದೇ ರಿಂಕು 2023 ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕೆಕೆಆರ್ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದರು. ಇದೀಗ ರಕ್ಷಾಬಂಧನದ ದಿನದಂದು ತನ್ನ ಬದುಕನ್ನು ಬದಲಿಸಿದ ಆ ಬ್ಯಾಟ್‌ಗೆ ರಾಖಿ ಕಟ್ಟಿರುವ ರಿಂಕು ಸಿಂಗ್, ಆ ಬ್ಯಾಟ್ ಅನ್ನು ಮನಸಾರೆ ಹೊಗಳಿದ್ದಾರೆ.
ವಿಡಿಯೋದಲ್ಲಿರುವಂತೆ ಮೊದಲಿಗೆ ಬ್ಯಾಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ರಿಂಕು, ‘ನಿನ್ನಿಂದಾಗಿಯೇ ನನ್ನ ವೃತ್ತಿಜೀವನ ನಿರ್ಮಾಣವಾಗಿದೆ. ನಿನ್ನಿಂದಾಗಿಯೇ ನಾನು ಇಂದು ಸೆಲೆಬ್ರಿಟಿಯಾಗಿದ್ದೇನೆ. ನಿನ್ನಿಂದಾಗಿ, ಆಕಾಶ ಕೂಡ ಈಗ ಚಿಕ್ಕದಾಗಿ ಕಾಣುತ್ತದೆ. ನಿನ್ನಿಂದಾಗಿ, ನನ್ನ ಎಲ್ಲಾ ಕನಸುಗಳು ನನಸಾಗಿವೆ. ನಿನ್ನ ಸಹಾಯದಿಂದ ನಾನು ಸಿಡಿಸಿದ ಆ ಐದು ಸಿಕ್ಸರ್‌ಗಳಿಂದಾಗಿ, ಜೀವನವು ಒಂದು ಸುಂದರವಾದ ಪ್ರಯಾಣವಾಗಿದೆ. ನಿನಗೆ ರಕ್ಷಾಬಂಧನದ ಶುಭಾಶಯಗಳು’ ಎಂದಿದ್ದಾರೆ. ಆ ಬಳಿಕ ತಮ್ಮ ಬ್ಯಾಟಿಗೆ ಕುಂಕುಮ ಇಟ್ಟಿರುವ ರಿಂಕು, ಬ್ಯಾಟ್ನ ಹಿಡಿಗೆ ರಾಖಿ ಕಟ್ಟಿದ್ದಾರೆ. ರಿಂಕು ಸಿಂಗ್ ಇದರ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಐಪಿಎಲ್ 2023 ರ 13 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 204 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಲು, ಕೆಕೆಆರ್‌ಗೆ ಕೊನೆಯ 6 ಎಸೆತಗಳಲ್ಲಿ 29 ರನ್‌ಗಳು ಬೇಕಾಗಿದ್ದವು. ಆ ಹಂತದಲ್ಲಿ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿತ್ತು.
ಇತ್ತ ಕೆಕೆಆರ್ ಪರ ರಿಂಕು ಸಿಂಗ್ 16 ಎಸೆತಗಳಲ್ಲಿ 18 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದರು. ಉಮೇಶ್ ಯಾದವ್ 4 ರನ್ ಗಳಿಸಿ ಕ್ರೀಸ್‌ನಲ್ಲಿ ಅವರೊಂದಿಗೆ ನಿಂತಿದ್ದರು. ಗುಜರಾತ್ ಟೈಟಾನ್ಸ್ ಪರ ಕೊನೆಯ ಓವರ್ ಎಸೆದ ವೇಗಿ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಒಂದು ರನ್ ತೆಗೆದುಕೊಂಡು ರಿಂಕು ಸಿಂಗ್‌ಗೆ ಸ್ಟ್ರೈಕ್ ನೀಡಿದರು. ಇದರ ನಂತರ ಏನಾಯಿತು ಎಂಬುದು ರಿಂಕು ಸಿಂಗ್ ಅವರ ಜೀವನವನ್ನು ಬದಲಾಯಿಸಿತು.
ರಿಂಕು ಸಿಂಗ್ ಸೇರಿದಂತೆ 7 ಕ್ರೀಡಾ ಸಾಧಕರಿಗೆ ಯುಪಿ ಸರ್ಕಾರದಿಂದ ಸರ್ಕಾರಿ ಉದ್ಯೋಗ
ರಿಂಕು ಸಿಂಗ್ ಸ್ಟ್ರೈಕ್‌ಗೆ ಬಂದಾಗ ತಂಡಕ್ಕೆ 5 ಎಸೆತಗಳಲ್ಲಿ 28 ರನ್‌ಗಳು ಬೇಕಾಗಿದ್ದವು. ಇಲ್ಲಿಂದ ಕೆಕೆಆರ್ ಪಂದ್ಯ ಗೆಲ್ಲಲು ಪವಾಡವೇ ನಡೆಯಬೇಕಿತ್ತು. ಆ ಪವಾಡವನ್ನು ರಿಂಕು ಸಿಂಗ್ ಮಾಡಿದರು. ಅವರು ಯಶ್ ದಯಾಳ್ ಅವರ ಮುಂದಿನ 5 ಎಸೆತಗಳಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ರಿಂಕು ತಂಡಕ್ಕೆ 3 ವಿಕೆಟ್‌ಗಳ ಅದ್ಭುತ ಜಯ ತಂದುಕೊಟ್ಟರು. ಈ ಪಂದ್ಯದ ನಂತರ, ರಿಂಕು ಸಿಂಗ್ ಸ್ಟಾರ್ ಆದರು. ಆ ಪಂದ್ಯದಲ್ಲಿ, ರಿಂಕು ಸಿಂಗ್ 21 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 48 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು, ಇದಕ್ಕಾಗಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಆಯ್ಕೆ ಮಾಡಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:52 pm, Sat, 9 August 25