ಕಾರು ಅಪಘಾತಕ್ಕೀಡಾಗಿ ನೋವಿನಿಂದ ನರಳುತ್ತಿದ್ದ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಅವರ ಜೀವ ಉಳಿಸಿದ ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನು ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಶುಕ್ರವಾರ ಸನ್ಮಾನಿಸಿ, ಗೌರವ ಸಮರ್ಪಣೆ ಮಾಡಿದೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಅಪಘಾತವಾದ ಕಾರಿನಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅವರನ್ನು ಗೌರವಿಸಲಾಗಿದೆ. ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ಕೂಡ ಈ ಇಬ್ಬರನ್ನೂ ಗೌರವಿಸಬಹುದು ಎಂದು ವರದಿಯಾಗಿದೆ.
ಪಂತ್ ಜೀವ ಉಳಿಸಿದ ನಮ್ಮ ಸಂಸ್ಥೆಯ ಡ್ರೈವರ್ ಹಾಗೂ ಕಂಡಕ್ಟರ್‌ಗೆ ನಮ್ಮ ಕಚೇರಿಯಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿದ್ದೇವೆ ಎಂದು ಹರಿಯಾಣ ರಾಜ್ಯ ಸಾರಿಗೆ ನಿಗಮದ ಪಾಣಿಪತ್ ಡಿಪೋದ ಜನರಲ್ ಮ್ಯಾನೇಜರ್ ಕುಲದೀಪ್ ಜಾಂಗ್ರಾ ಹೇಳಿಕೆ ನೀಡಿದ್ದಾರೆ. ‘ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದನ್ನು ನೋಡಿದ ನಮ್ಮ ಸಂಸ್ಥೆಯ ಚಾಲಕ ಸುಶೀಲ್ ಕುಮಾರ್ ಬಸ್ಸ್ ನಿಲ್ಲಿಸಿ, ಕಂಡಕ್ಟರ್ ಜೊತೆ ಸೇರಿ ಅಪಘಾತಕ್ಕೊಳಗಾಗಿದ್ದ ರಿಷಬ್ ಪಂತ್ಗೆ ನೆರವಾಗಿದ್ದಾರೆ. ಈ ಮೂಲಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಮಾನವೀಯತೆಗೆ ಮಾದರಿಯಾಗಿದ್ದಾರೆ’ ಎಂದು ಜಾಂಗ್ರಾ ಹೇಳಿದ್ದಾರೆ.
ದುಬಾರಿ ಕಾರುಗಳ ಒಡೆಯ ರಿಷಬ್ ಪಂತ್ಗೆ ಕಡಿಮೆ ಬೆಲೆಯ ಈ ಕಾರೆಂದರೆ ಬಲು ಅಚ್ಚುಮೆಚ್ಚು!
ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿತ್ತು. ಅಪಘಾತದ ನಂತರ ಪಂತ್ ಅವರನ್ನು ತಕ್ಷಣ ಆಂಬುಲೆನ್ಸ್ನಲ್ಲಿ ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕಾರ ಪಂತ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ವಾಸ್ತವವಾಗಿ, ಬಾಂಗ್ಲಾದೇಶ ಪ್ರವಾಸ ಮುಗಿಸಿದ್ದ ಪಂತ್ ಕ್ರಿಸ್ಮಸ್ ಸಂಭ್ರಮಾಚರಣೆಗಾಗಿ ದುಬೈಗೆ ಹಾರಿದ್ದರು. ಅಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಕುಟುಂಬದೊಂದಿಗೆ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಭಾರತಕ್ಕೆ ವಾಪಸ್ಸಾಗಿದ್ದ ಪಂತ್, ತಾಯಿ ಹಾಗೂ ಕುಟುಂಬದವರೊಂದಿಗೆ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ಇದಕ್ಕಿದ್ದಂತೆ ಪ್ರತ್ಯಕ್ಷರಾಗಿ ತಾಯಿಗೆ ಸಫ್ರೈಸ್ ನೀಡಲು ಯೋಚಿಸಿದ್ದ ಪಂತ್ ಮಧ್ಯ ರಾತ್ರಿ 2 ಗಂಟೆಗೆ ದೆಹಲಿಯಿಂದ ಹೊರಟು ಮುಂಜಾನೆ ವೇಳೆಗೆ ಮನೆ ತಲುಪುವ ಉದ್ದೇಶದಿಂದ ಈ ಪ್ರಯಾಣ ಆರಂಭಸಿದ್ದರು. ಆದರೆ ರಸ್ತೆ ಮಧ್ಯದಲ್ಲಿಯೇ ಈ ಅವಘಡ ಸಂಭವಿಸಿದೆ.
ಇಡೀ ಪ್ರಕರಣದ ಬಗ್ಗೆ ವರದಿ ನೀಡಿರುವ ಹರಿದ್ವಾರ ಪೊಲೀಸ್‌ನ ಹಿರಿಯ ಅಧೀಕ್ಷಕ ಅಜಯ್ ಸಿಂಗ್, ಬೆಳಗ್ಗಿನ ಜಾವವಾಗಿದ್ದರಿಂದ ಪಂತ್ ಸ್ವಲ್ಪ ಎಚ್ಚರ ತಪ್ಪಿದ್ದಾರೆ. ಹೀಗಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಅವರ ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಆ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಹರಿಯಾಣ ರೋಡ್‌ವೇಸ್ ಬಸ್‌ನ ಚಾಲಕ ಮತ್ತು ಉಳಿದ ಸಿಬ್ಬಂದಿ ಆತನನ್ನು ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಹೊರತೆಗೆದಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ