ಭಾರತ-ಸೌತ್ ಆಫ್ರಿಕಾ ನಡುವಣ 5ನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಎರಡೆರಡು ಮ್ಯಾಚ್ ಗೆದ್ದಿರುವ ಕಾರಣ, ಇದು ಫೈನಲ್ ಪಂದ್ಯವಾಗಿದೆ. ಹೀಗಾಗಿ ಟ್ರೋಫಿ ಗೆಲ್ಲಲು ಎರಡೂ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬರಲಿದೆ. ಈ ಪಂದ್ಯವು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರಣ ಟಾಸ್ ಬಹಳ ಮುಖ್ಯವಾಗುತ್ತೆ. ಏಕೆಂದರೆ ಚಿನ್ನಸ್ವಾಮಿ ಪಿಚ್ ಚೇಸಿಂಗ್ಗೆ ಸಹಕಾರಿ. ಹೀಗಾಗಿ ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗಿತ್ತು. ಅದರಂತೆ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ನಿರೀಕ್ಷೆಯಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶೇಷ ಎಂದರೆ ಇದರೊಂದಿಗೆ ಇಡೀ ಸರಣಿಯಲ್ಲಿ ಟಾಸ್ ಸೋತ ನಾಯಕನಾಗಿ ರಿಷಭ್ ಪಂತ್ ಹೊರಹೊಮ್ಮಿದ್ದಾರೆ.
ಅಂದರೆ ಸೌತ್ ಆಫ್ರಿಕಾ ವಿರುದ್ದದ 5 ಪಂದ್ಯಗಳಲ್ಲೂ ರಿಷಭ್ ಪಂತ್ ಒಂದೇ ಒಂದು ಬಾರಿ ಟಾಸ್ ಗೆದ್ದಿಲ್ಲ. ಇತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ರಿಷಭ್ ಪಂತ್ ಟಾಸ್ ಸೋಲುವುದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅದು ಕೂಡ ವಿರಾಟ್ ಕೊಹ್ಲಿಯ ಹೆಸರಿನೊಂದಿಗೆ ಎಂಬುದು ವಿಶೇಷ. ಅಂದರೆ ಟಾಸ್ ವಿಷಯದಲ್ಲಿ ವಿರಾಟ್ ಕೊಹ್ಲಿಯನ್ನು ನತದೃಷ್ಟ ನಾಯಕ ಎನ್ನಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡ ರಿಷಭ್ ಪಂತ್ ಸತತ ಐದು ಬಾರಿ ಟಾಸ್ ಸೋತಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಭವಿಷ್ಯದ ಟೀಮ್ ಇಂಡಿಯಾ ನಾಯಕ ಎನ್ನಲಾಗುತ್ತಿದೆ.
ಇದೇ ಕಾರಣದಿಂದ ಇದೀಗ ರಿಷಭ್ ಪಂತ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಒಂದು ವೇಳೆ ಪಂತ್ ಟೀಮ್ ಇಂಡಿಯಾ ನಾಯಕರಾದರೆ ಟಾಸ್ ವಿಷಯದಲ್ಲಿ ವಿರಾಟ್ ಕೊಹ್ಲಿಯನ್ನೇ ಮೀರಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಇದು ಜಸ್ಟ್ ಆರಂಭ. ಐದೂ ಪಂದ್ಯಗಳಲ್ಲೂ ಟಾಸ್ ಸೋತಿರುವ ರಿಷಭ್ ಪಂತ್ ತಾನೆಂತಹ ನತದೃಷ್ಟ ನಾಯಕ ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಟಾಸ್ ವಿಷಯದಲ್ಲಿ ಹಿಂದಿಕ್ಕಲಿದ್ದಾರೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾವನ್ನು 49 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಕೊಹ್ಲಿ ಟಾಸ್ ಗೆದ್ದಿದ್ದು ಕೇವಲ 19 ಬಾರಿ ಮಾತ್ರ. ಅಂದರೆ 30 ಬಾರಿ ಟಾಸ್ ಫೇಲ್ ಆಗಿದ್ದಾರೆ. ಇದೀಗ ನಾಯಕನಾಗಿ ಪದಾರ್ಪಣೆ ಮಾಡಿರುವ ರಿಷಭ್ ಪಂತ್ ತಮ್ಮ ಮೊದಲ ಐದು ಪಂದ್ಯಗಳಲ್ಲಿ ಟಾಸ್ ಸೋಲುವ ಗಮನ ಸೆಳೆದಿದ್ದಾರೆ. ಹೀಗಾಗಿಯೇ ರಿಷಭ್ ಪಂತ್ ನಾಯಕರಾದರೆ ಟೀಮ್ ಇಂಡಿಯಾ ಟಾಸ್ ಗೆಲ್ಲುವುದನ್ನು ಯಾರು ಕೂಡ ನಿರೀಕ್ಷಿಸಬೇಡಿ ಎಂದು ಟ್ರೋಲ್ ಮಾಡಲಾಗುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಏಕೆ ಮುಖ್ಯ?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಲಾಗಿದೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು ಕೇವಲ 3 ಬಾರಿ ಮಾತ್ರ. ಅಂದರೆ ಚೇಸಿಂಗ್ ಮಾಡಿ 5 ಬಾರಿ ಜಯ ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡುತ್ತೆ.
ಇನ್ನು ಮೊದಲು ಬ್ಯಾಟ್ ಮಾಡಿದರೂ ಗೆಲ್ಲಬಹುದು. ಇದಕ್ಕಾಗಿ ಫಸ್ಟ್ ಬ್ಯಾಟ್ ಮಾಡುವ ತಂಡ 180 ಕ್ಕಿಂತ ಅಧಿಕ ರನ್ ಕಲೆಹಾಕಬೇಕು. ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂನ ಅವರೇಜ್ ಸ್ಕೋರ್ 150. ಹೀಗಾಗಿ ಮೊದಲು ಬ್ಯಾಟ್ ಮಾಡುವ ತಂಡ ದೊಡ್ಡ ಮೊತ್ತ ಕಲೆಹಾಕಿದರೆ ಮಾತ್ರ ಗೆಲುವು ಸಾಧಿಸಬಹುದು.
ಏಕೆಂದರೆ ಟೀಮ್ ಇಂಡಿಯಾ ಇದೇ ಮೈದಾನದಲ್ಲಿ 2017 ರಲ್ಲಿ ಇಂಗ್ಲೆಂಡ್ ವಿರುದ್ದ 202 ರನ್ ಕಲೆಹಾಕಿದ್ದು, ಇಲ್ಲಿನ ಗರಿಷ್ಠ ಸ್ಕೋರ್ ಆಗಿದೆ. ಅದು ಕೂಡ ಮೊದಲು ಬ್ಯಾಟ್ ಮಾಡಿ ಎಂಬುದು ವಿಶೇಷ. ಆ ಪಂದ್ಯವನ್ನು ಭಾರತ ತಂಡ ಗೆದ್ದಿತ್ತು. ಹಾಗಾಗಿ ಇಲ್ಲಿ ಟಾಸ್ ಸೋತರೂ 180 ಕ್ಕಿಂತ ಹೆಚ್ಚು ರನ್ಗಳಿಸಿದರೆ ಮ್ಯಾಚ್ ವಿನ್ ಆಗಬಹುದು. ಅದರಂತೆ ಟಾಸ್ ಸೋತಿರುವ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಲಿದೆಯಾ ಕಾದು ನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.