ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ಕ್ರಿಕೆಟ್ ಅಂಗಳದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅದು ಟೆಸ್ಟ್ ಪಂದ್ಯವಾಗಿರಲಿ, ಇಲ್ಲ ಏಕದಿನ ಮ್ಯಾಚ್ ಆಗಿರಲಿ…ರಿಷಭ್ ಪಂತ್ ಕ್ರೀಸ್ನಲ್ಲಿದ್ದರೆ ಭಾರತ ಪಂದ್ಯ ಗೆದ್ದಂತೆ ಎನ್ನುವಷ್ಟರ ಮಟ್ಟಿಗೆ ವಿಶ್ವಾಸ ಮೂಡಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ಪರ ಹೀಗೊಂದು ಪರ್ವ ಸೃಷ್ಟಿಸಿರುವ ಪಂತ್ ಅತ್ತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಲಾಭ ತಂದುಕೊಟ್ಟಿದ್ದಾರೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ರಿಷಭ್ ಪಂತ್ ಅವರ ಒಂದೇ ಒಂದು ಇನಿಂಗ್ಸ್ನಿಂದಾಗಿ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಭರ್ಜರಿ ಲಾಭವನ್ನು ಪಡೆದುಕೊಂಡಿದೆ. ಅದು ಕೂಡ ಟಿವಿ ರೈಟ್ಸ್ ಮಾರಾಟದ ಮೂಲಕ.
ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟೂರ್ನಿಗಳ ಟಿವಿ ರೈಟ್ಸ್ ಮಾರಾಟಕ್ಕೆ ಬಿಡ್ಡಿಂಗ್ ಕರೆದಿತ್ತು. ಇದೀಗ 2 ಸಾವಿರ ಕೋಟಿ ನೀಡಿ 7 ವರ್ಷಗಳವರೆಗಿನ ಆಸ್ಟ್ರೇಲಿಯಾ ಪಂದ್ಯಗಳ ಮಾಧ್ಯಮ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಪಡೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ 2021 ರಲ್ಲಿ ರಿಷಭ್ ಪಂತ್ ಆಡಿದ ಒಂದು ಇನಿಂಗ್ಸ್ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷ ಗಬ್ಬಾ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ಪಂತ್ 89 ರನ್ಗಳ ಐತಿಹಾಸಿಕ ಇನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಅಷ್ಟೇ ಅಲ್ಲದೆ 2-1 ಅಂತರದಿಂದ ಸರಣಿ ಜಯಿಸಿ ಹೊಸ ಇತಿಹಾಸ ಬರೆಯಿತು. ಈ ಸರಣಿ ಗೆಲುವಿನ ರುವಾರಿ ರಿಷಭ್ ಪಂತ್.
ಅಂದು ರಿಷಭ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಅನ್ನು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಟಿವಿಯಲ್ಲಿ ವೀಕ್ಷಿಸಿದ್ದರು. ಹೀಗಾಗಿಯೇ ಆಸ್ಟ್ರೇಲಿಯಾ ಪಂದ್ಯಗಳ ವಾಲ್ಯೂ ಕೂಡ ಹೆಚ್ಚಾಗಿತ್ತು. ಇದೇ ಕಾರಣದಿಂದಾಗಿ ಈ ಬಾರಿ ಆಸ್ಟ್ರೇಲಿಯಾ ಪಂದ್ಯಗಳ ಟಿವಿ ರೈಟ್ಸ್ಗಾಗಿ ಭರ್ಜರಿ ಪೈಪೋಟಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ದ ಪ್ರಮುಖ ಸರಣಿಗಳನ್ನು ಆಡಲಿದೆ.
ಇದನ್ನೆಲ್ಲಾ ಮುಂದಿಟ್ಟು ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮ ಹಕ್ಕುಗಳ ಹರಾಜನ್ನು ನಡೆಸಿದ್ದು, ಅಂತಿಮವಾಗಿ ಡಿಸ್ನಿ ಸ್ಟಾರ್ ಸುಮಾರು 2 ಸಾವಿರ ಕೋಟಿ ರೂ.ಗೆ 7 ವರ್ಷಗಳವರೆಗಿನ ಆಸ್ಟ್ರೇಲಿಯಾದ ಪಂದ್ಯಗಳ ಟಿವಿ ರೈಟ್ಸ್ ಪಡೆದುಕೊಂಡಿದೆ. ಇತ್ತ ನಿರೀಕ್ಷೆಗೂ ಮೀರಿ ಕ್ರಿಕೆಟ್ ಆಸ್ಟ್ರೇಲಿಯಾ ಆದಾಯಗಳಿಸಲು ಮುಖ್ಯ ಕಾರಣ ರಿಷಭ್ ಪಂತ್ ಗಬ್ಬಾದಲ್ಲಿ ಆಡಿದ ಆ ಒಂದು ಇನಿಂಗ್ಸ್ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಡಿಸ್ನಿ ಸ್ಟಾರ್ ಇತ್ತೀಚೆಗೆ 2023-27ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಟಿವಿ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಬಿಗ್ ಬ್ಯಾಷ್ ಲೀಗ್ ಅನ್ನು ಕೂಡ ಪ್ರಸಾರ ಮಾಡಲಿದ್ದಾರೆ. ಅಂದರೆ, ವಿಶ್ವದ ಎರಡು ಪ್ರಮುಖ T20 ಕ್ರಿಕೆಟ್ ಲೀಗ್‌ಗಳ ಪ್ರಸಾರ ಹಕ್ಕುಗಳು ಈಗ ಡಿಸ್ನಿ ಸ್ಟಾರ್ ಬಳಿ ಇರುವುದು ವಿಶೇಷ.