ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶುಕ್ರವಾರ ಬೆಳಗ್ಗೆ ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದಾಗ ಪಂತ್ ಅವರ ಕಾರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಎದುರು ರಸ್ತೆಯಲ್ಲಿ ಪಲ್ಟಿಯಾಗಿದೆ. ಸದ್ಯ ಅವರು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವರ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ಪಂತ್ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದರೆ, ಪಂತ್ ಅತಿ ವೇಗದಲ್ಲಿ ಕಾರನ್ನು ಚಲಾಯಿಸುತ್ತಿರುವುದನ್ನು ಕಾಣಬಹುದಾಗಿದೆ. ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿದ್ದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದಾದ ಬಳಿಕ ಡಿವೈಡರ್ ಮೇಲೆ ಬಹಳ ದೂರ ಹೋದ ಕಾರು ಬಳಿಕ ಎದುರು ರಸ್ತೆಯಲ್ಲಿ ಪಲ್ಟಿಯಾಗಿದೆ.
#Rishabpant car accedent on dehradun village wishes you a speedy recovery pic.twitter.com/D1TjDQ5Fh9
— Mr.Vikram (@ivikramjat) December 30, 2022
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವೆಬ್‌ಸೈಟ್ ಪ್ರಕಾರ, ಪಂತ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್ ಅವರ ಹೇಳಿಕೆಯ ಪ್ರಕಾರ, ಪಂತ್‌ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ. ಮೊದಲ ಎಕ್ಸ್-ರೇ ಪ್ರಕಾರ ಯಾವುದೇ ಮೂಳೆ ಮುರಿದಿಲ್ಲ. ಅಲ್ಲದೆ ಕಾರಿಗೆ ಬೆಂಕಿ ಹೊತ್ತಿಕೊಂಡರೂ ಸಹ ಪಂತ್‌ಗೆ ಎಲ್ಲಿಯೂ ಸುಟ್ಟ ಗಾಯಗಳಾಗಿಲ್ಲ. ಹಣೆಯ ಮೇಲೆ, ಎಡಗಣ್ಣಿನ ಮೇಲೆ, ಮೊಣಕಾಲು ಮತ್ತು ಹಿಂಭಾಗದಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.
Car Accident: ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಐವರು ಖ್ಯಾತ ಕ್ರಿಕೆಟಿಗರಿವರು
ಕಳೆದ ವಾರ ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಪಂತ್ ಕೊನೆಯದಾಗಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ 93 ರನ್ ಭಾರಿಸಿದ್ದ ಪಂತ್, ಟೀಂ ಇಂಡಿಯಾ ಸರಣಿಯನ್ನು 2-0 ರಿಂದ ಗೆದ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ದುಬೈಗೆ ಹಾರಿದ್ದ ಪಂತ್, ಅಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೂಡಿ ಸಮಯ ಕಳೆದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Fri, 30 December 22