Updated on:Dec 30, 2022 | 11:35 AM
ರಸ್ತೆ ಅಪಘಾತದಲ್ಲಿ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದಾರೆ. ರೂರ್ಕಿಯಲ್ಲಿರುವ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಗಂಭೀರ ಅಪಘಾತದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂಬುದೇ ಸಮಾಧಾನ ನೀಡುವ ಸುದ್ದಿ. ಆದರೆ ಇಂತಹ ಅಪಘಾತದಲ್ಲಿ ಈಗಾಗಲೇ ಹಲವು ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಕೆಲವು ಕ್ರಿಕೆಟಿಗರ ವರದಿ ಇಲ್ಲಿದೆ.
ಮೇ 2022 ರಲ್ಲಿ, ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಜಗತ್ತಿಗೆ ವಿದಾಯ ಹೇಳಿದರು. ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಅವರಿಗೆ ಅಪಘಾತ ಸಂಭವಿಸಿತ್ತು.
ಮಾರ್ಚ್ 2012 ರಲ್ಲಿ, ವೆಸ್ಟ್ ಇಂಡೀಸ್ ಕ್ರಿಕೆಟಿಗ ರುನಾಕೊ ಮಾರ್ಟನ್ ಅವರು ತಮ್ಮ 33 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಹೆದ್ದಾರಿಯೊಂದರ ಕಂಬಕ್ಕೆ ರುನಾಕೊ ಮಾರ್ಟನ್ ಕಾರು ಅಪ್ಪಳಿಸಿತ್ತು. ಈ ಪರಿಣಾಮ ವಿಂಡೀಸ್ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮಾರ್ಚ್ 2002 ರಲ್ಲಿ, ಇಂಗ್ಲಿಷ್ ಕ್ರಿಕೆಟಿಗ ಬೆನ್ ಹೋಲಿಯೋಕ್ ಅವರ ಕಾರು ರಸ್ತೆಯಿಂದ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿತು. ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಬೆನ್ ಸ್ಥಳದಲ್ಲಿಯೇ ಅಸುನೀಗಿದರೆ, ಅವರ ಗೆಳತಿ 3 ವಾರಗಳ ಕಾಲ ಕೋಮಾದಲ್ಲಿದ್ದು, ಆ ನಂತರ ಚೇತರಿಸಿಕೊಂಡರು.
ಬಾಂಗ್ಲಾದೇಶ ತಂಡ ಆಟಗಾರ ಮಂಜುರುಲ್ ಇಸ್ಲಾಂ ರಾಣಾ ಅವರು ಮಾರ್ಚ್ 16, 2007 ರಂದು ತಮ್ಮ 22 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಜಗತ್ತಿಗೆ ವಿದಾಯ ಹೇಳಿದ್ದರು. 2007ರ ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡ ವೆಸ್ಟ್ ಇಂಡೀಸ್‌ನಲ್ಲಿತ್ತು. ಈ ವೇಳೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಮಂಜುರುಲ್ ಇಸ್ಲಾಂ, ಮಿನಿ ಬಸ್ಗೆ ಡಿಕ್ಕಿ ಹೊಡೆದಿದ್ದರು. ಬಳಿಕ ನಿಯಂತ್ರಣ ಕಳೆದುಕೊಂಡ ಬೈಕ್ ಗೇಟ್ ಅಂಚಿನಲ್ಲಿದ್ದ ಪಿಲ್ಲರ್ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಮಂಜುರುಲ್ ಇಸ್ಲಾಂ ತೀವ್ರ ಇಂಜುರಿಯಿಂದಾಗಿ ಸಾವನ್ನಪ್ಪಿದರು.
ಫೆಬ್ರವರಿ 2021 ರಲ್ಲಿ, 63 ವರ್ಷದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಎಜ್ರಾ ಮೊಸ್ಲೆ ರಸ್ತೆ ಅಪಘಾತದಲ್ಲಿ ನಿಧನರಾದರು. ಬಾರ್ಬಡೋಸ್‌ನ ಎಬಿಸಿ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಜ್ರಾ ಮೊಸ್ಲೆ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
Published On - 11:35 am, Fri, 30 December 22