ಐಪಿಎಲ್ 2022 ರಲ್ಲಿ (IPL 2022) ಶುಕ್ರವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC vs RR) ಸೋಲು ಕಂಡಿತು. ಈ ಮೂಲಕ ಆಡಿದ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲುಂಡು ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಹೈ ಸ್ಕೋರ್ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಪಡೆ ಗೆಲುವಿಗಾಗಿ ಕೊನೆಯ ಓವರ್ ವರೆಗೂ ಹೋರಾಡಿ ಸೋತಿತು. ಆರ್ಆರ್ ಆರಂಭಿಕ ಜೋಸ್ ಬಟ್ಲರ್ (116 ರನ್, 65 ಎಸೆತ, 9 ಬೌಂಡರಿ, 9 ಸಿಕ್ಸರ್) ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (54ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ 222 ರನ್ ಕಲೆಹಾಕಿತು. ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗೆ 8 ವಿಕೆಟ್‌ಗೆ 207 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಅದರಲ್ಲೂ ಕೊನೆಯ ಓವರ್ನಲ್ಲಿ ನೋ ಬಾಲ್ ಕುರಿತು ಹೈ ಡ್ರಾಮವೇ ನಡೆದು ಹೋಯಿತು.
ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, “ಪಂದ್ಯದ ಕೊನೆಯ ಹಂತದ ವರೆಗೂ ರಾಜಸ್ಥಾನ್ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದರು. ಆದರೆ, ಅಂತಿಮ ಹಂತದಲ್ಲಿ ರೋವ್ಮನ್ ಪೊವೆಲ್ ನಮಗೆ ಗೆಲುವಿನ ಆಸೆ ಚಿಗುರಿಸಿದರು. ಆ ಎಸೆತಕ್ಕೆ ನೋ ಬಾಲ್ ತೀರ್ಪು ಕೊಟ್ಟಿದ್ದರೆ, ನಮ್ಮ ಪಾಲಿಗೆ ಅತ್ಯಮೂಲ್ಯವಾಗಿರುತ್ತಿತ್ತು. ಅದನ್ನು ನಾವು ಕೂಡ ಪರಿಶೀಲನೆ ಮಾಡಬಹುದಿತ್ತು. ಆದರೆ ಇದು ನಮ್ಮ ನಿಯಂತ್ರಣದಲ್ಲಿಲ್ಲ. ಇದರಿಂದ ಎಲ್ಲರಿಗೂ ತುಂಬಾ ನೋವಾಗಿದೆ. ಏಕೆಂದರೆ, ಅದು ನೋ ಬಾಲ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಥರ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ನೋ ಬಾಲ್ ಎಂದು ತೀರ್ಪು ನೀಡಬಹುದಿತ್ತು. ಆದರೆ, ಈ ಕೆಲಸ ಕೂಡ ಅಲ್ಲಿ ನಡೆಯಲಿಲ್ಲ,” ಎಂದು ಅಂಪೈರ್ ವಿರುದ್ಧ ನೇರವಾಗಿ ದೂರಿದ್ದಾರೆ.
“ಈ ನೋ ಬಾಲ್ ವಿಷಯದಲ್ಲಿ ಸರಿಯಾದ ತೀರ್ಪು ಮೂಡಿ ಬಂದಿದ್ದರೆ, ಇಡೀ ಪಂದ್ಯದ ಚಿತ್ರಣ ಬದಲಾಗುತ್ತಿತ್ತು. ಮೈದಾನದಲ್ಲಿ ನಮಗೆ ಏನಾಯಿತು ಅದು ಸರಿಯಲ್ಲ. ಸನ್ನಿವೇಶ ಸ್ವಲ್ಪ ಕಠಿಣವಾಗಿತ್ತು. ಇದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಇಬ್ಬರೂ ಅಂಪೈರ್‌ಗಳು ನೋ ಬಾಲ್ ವಿಷಯದಲ್ಲಿ ತಪ್ಪು ಮಾಡಿದ್ದಾರೆಂದು ನನಗೆ ಅನಿಸುತ್ತಿದೆ. ಆದರೆ, ಟೂರ್ನಿಯುದ್ದಕ್ಕೂ ನಾವು ಅತ್ಯುತ್ತಮ ಅಂಪೈರಿಂಗ್ ಅನ್ನು ನೋಡಿದ್ದೇವೆ. ನಮ್ಮ ಬೌಲಿಂಗ್ ಚೆನ್ನಾಗಿರಲಿಲ್ಲ ನಿಜ. ಆದರೆ, ದೊಡ್ಡ ಮೊತ್ತ ಟಾರ್ಗೆಟ್ ಬೆನ್ನಟ್ಟಿ ಇಷ್ಟು ಹತ್ತಿರ ಬಂದು ಸೋಲು ಅನುಭವಿಸಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ. ಇಲ್ಲಿ ಮಾಡಿರುವ ತಪ್ಪನ್ನು ತಿದ್ದಿ ಮುಂದಿನ ಪಂದ್ಯದಲ್ಲಿ ಇನ್ನಷ್ಟು ಬಲಿಷ್ಠವಾಗಿ ಕಮ್ಬ್ಯಾಕ್ ಮಾಡುತ್ತೇವೆ,” ಎಂಬುದು ಪಂತ್ ಮಾತು.
ಇನ್ನು ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, “ಅದು ಫುಲ್-ಟಾಸ್ ಬಾಲ್ ಆಗಿತ್ತು ಮತ್ತು ಬ್ಯಾಟ್ಸ್ಮನ್ ಅದನ್ನು ನೋ ಬಾಲ್ ಕೊಡಿ ಎಂದು ಕೇಳಿದರು. ಆದರೆ, ಅಂಪೈರ್ ಕೊಡಲಿಲ್ಲ. ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸ್ ಬಾರಿಸಿದ ಸಂದರ್ಭ ಬೌಲರ್ಗೆ ಬೌಲಿಂಗ್ ಮಾಡುವುದು ಸುಲಭ ಆಗಿರುವುದಿಲ್ಲ. ಕಳೆದ ಪಂದ್ಯದಂತೆ ಈ ಪಂದ್ಯ ಕೂಡ ಕಷ್ಟವಾಗಿತ್ತು. ರೋವ್ಮನ್ ಪೊವೆಲ್ ಆರೀತಿ ಸಿಕ್ಸರ್ಗಳನ್ನು ಸಿಡಿಸುತ್ತಿದ್ದಾಗ ಸಮಾಧಾನದಿಂದ ಯೋಚಿಸಿ ನಮ್ಮ ತಂಡದ ಆಟಗಾರರನ್ನು ನಂಬುವುದು ಮುಖ್ಯ. ಟಾಸ್ ಬಗ್ಗೆ ಏನನ್ನು ಹೇಳಲು ಸಾಧ್ಯವಿಲ್ಲ. ಟಾಸ್ ಸೋತರು ಈಗ ಪಂದ್ಯವನ್ನು ಗೆಲ್ಲುತ್ತಿದ್ದೇವೆ. ಬಟ್ಲರ್ ಆಟ ಅದ್ಭುತವಾಗಿತ್ತು. ಪಡಿಕ್ಕಲ್ ಕೂಡ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು,” ಎಂದು ಹೇಳಿದ್ದಾರೆ.
Rishabb Pant: ಅಂಪೈರ್ ನೋ ಬಾಲ್ ಕೊಟ್ಟಿಲ್ಲ ಹೋಗಿ ಕೇಳೆಂದು ಕೋಚ್ ಅನ್ನೇ ಮೈದಾನಕ್ಕೆ ಅಟ್ಟಿದ ಪಂತ್
RCB vs SRH: ಐಪಿಎಲ್ನಲ್ಲಿಂದು ಎರಡು ಪಂದ್ಯ: ಗೆಲುವಿನ ಓಟ ಮುಂದುವರೆಸುತ್ತಾ ಆರ್ಸಿಬಿ?