ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಹಿರಿಯ ಆಟಗಾರರ ಪ್ರದರ್ಶನದ ಮೇಲೆ ಪ್ರಶ್ನೆಗಳು ಎದ್ದಿವೆ. ಭಾರತ ಈ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಕಾಂಗರೂಗಳ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಸರಣಿಯಲ್ಲೂ ತಂಡದ ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ, ಅವರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬಹುದು. ಹೀಗಿರುವಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮೇಲೂ ಕತ್ತಿ ತೂಗುತ್ತಿದೆ. ಒಂದು ವೇಳೆ ರೋಹಿತ್ ಶರ್ಮಾ ತಂಡದಿಂದ ಹೊರಬಿದ್ದರೆ, ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೆಸ್ಟ್ ತಂಡಕ್ಕೆ ಸೂಕ್ತ ನಾಯಕನ ಹೆಸರನ್ನು ಸೂಚಿಸಿದ್ದಾರೆ.
ರೋಹಿತ್ ಶರ್ಮಾ ನಂತರ ಯಾರು ಭಾರತ ಟೆಸ್ಟ್ ತಂಡದ ನಾಯಕನಾಗಬೇಕು ಎಂಬುದಕ್ಕೆ ಉತ್ತರಿಸಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ರಿಷಬ್ ಪಂತ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಪ್ರಸ್ತುತ ತಂಡದಲ್ಲಿ ನಾಯಕತ್ವದ ರೇಸ್‌ನಲ್ಲಿರುವ ಏಕೈಕ ಆಟಗಾರ ಪಂತ್ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ ಕೈಫ್, ‘ಪ್ರಸ್ತುತ ತಂಡದಿಂದ, ರಿಷಬ್ ಪಂತ್ ಮಾತ್ರ ಟೆಸ್ಟ್ ನಾಯಕನಾಗುವ ರೇಸ್‌ನಲ್ಲಿದ್ದಾರೆ. ಅವರು ಅದಕ್ಕೆ ಅರ್ಹರು, ಅವರು ಆಡಿದಾಗಲೆಲ್ಲಾ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಅವರು ಯಾವುದೇ ಕ್ರಮಾಂಕದಲ್ಲಿ ಆಡಲಿ, ಅವರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಲು ಸಿದ್ಧವಾಗಿರುತ್ತಾರೆ. ಅದು ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ಆಗಿರಲಿ, ಅವರು ಸಂಪೂರ್ಣ ಬ್ಯಾಟ್ಸ್‌ಮನ್ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಕೈಫ್, ‘ರಿಷಭ್ ಪಂತ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದಾಗ, ಅವರು ದಂತಕಥೆಯಾಗಿ ನಿವೃತ್ತರಾಗುತ್ತಾರೆ. ಅವರ ಕೀಪಿಂಗ್ ಬಹಳಷ್ಟು ಸುಧಾರಿಸಿದೆ ಎಂದು ಅವರು ಈಗಾಗಲೇ ತೋರಿಸಿದ್ದಾರೆ. ಅವರು ಕ್ರೀಸ್‌ನಲ್ಲಿರುವವರೆಗೂ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ಆತಂಕ ಎದುರಾಗಿತ್ತು. ಹೀಗಾಗಿ ಪ್ರಸ್ತುತ ಆಟಗಾರರಲ್ಲಿ, ನೀವು ಭವಿಷ್ಯದ ನಾಯಕನನ್ನು ಹುಡುಕುತ್ತಿದ್ದರೆ, ರಿಷಬ್ ಪಂತ್ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಲು ಅರ್ಹರು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Mon, 4 November 24