Rishabh Pant Accident: ಕಾರು ಅಪಘಾತದಲ್ಲಿ ರಿಷಭ್ ಪಂತ್‌ಗೆ ಗಂಭೀರ ಗಾಯ; ಬೇಗ ಗುಣಮುಖರಾಗಲಿ ಎಂದ ಮಾಜಿ ಕ್ರಿಕೆಟಿಗರು

| Updated By: ಪೃಥ್ವಿಶಂಕರ

Updated on: Dec 30, 2022 | 10:32 AM

Rishabh Pant Accident: ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ.

Rishabh Pant Accident: ಕಾರು ಅಪಘಾತದಲ್ಲಿ ರಿಷಭ್ ಪಂತ್‌ಗೆ ಗಂಭೀರ ಗಾಯ; ಬೇಗ ಗುಣಮುಖರಾಗಲಿ ಎಂದ ಮಾಜಿ ಕ್ರಿಕೆಟಿಗರು
ರಿಷಬ್ ಪಂತ್
Follow us on

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿದೆ. ರಾಷ್ಟ್ರೀಯ ಹೆದ್ದಾರಿ 58ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೂಲಗಳ ಪ್ರಕಾರ ಈ ಘಟನೆಯಲ್ಲಿ ಪಂತ್ ಅವರ ಕಾಲು ಮುರಿತಕ್ಕೊಳಗಾಗಿದೆ ಎಂದು ವರದಿಯಾಗಿದೆ. ಅಪಘಾತದ ನಂತರ ಪಂತ್ ಅವರನ್ನು ತಕ್ಷಣ ಆಂಬುಲೆನ್ಸ್​ನಲ್ಲಿ ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪಂತ್ ಅವರ ಕಾರಿನ ಫೋಟೋಗಳನ್ನು ನೋಡಿದರೆ ಈ ಅಪಘಾತ ಎಷ್ಟು ಭೀಕರವಾಗಿರಬಹುದೆಂದು ಊಹಿಸಬಹುದು. ಪಂತ್ ಅವರ ಸ್ಥಿತಿ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾದ ಯುವ ಕ್ರಿಕೆಟಿಗ ಬೇಗ ಚೇತರಿಸಿಕೊಳ್ಳಲಿ ಎಂದು ಭಾರತದ ಮಾಜಿ ಆಟಗಾರರು ಹಾರೈಸಿದ್ದಾರೆ.

ಗಾರ್ಡ್‌ರೈಲ್‌ಗೆ ಡಿಕ್ಕಿ ಹೊಡೆದ ಕಾರು

ಮಾಹಿತಿ ಪ್ರಕಾರ, ಪಂತ್ ಅವರ ತಲೆ ಮತ್ತು ಕಾಲಿಗೆ ಗಾಯಗಳಾಗಿವೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪ್ನಾ ಕಿಶೋರ್ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಂತ್ ಅವರ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದಿದೆ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

Rishabh Pant Car Accident: ಅಪಘಾತದಲ್ಲಿ ರಿಷಭ್ ಪಂತ್​ಗೆ ಗಂಭೀರ ಗಾಯ: ಕಾರು ಸಂಪೂರ್ಣ ಭಸ್ಮ: ಫೋಟೋ

ಕ್ರಿಕೆಟ್‌ನಿಂದ ದೂರ ?

ಮೂಲಗಳ ಪ್ರಕಾರ ಪಂತ್ ಅವರ ಕಾಲು ಮುರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಕ್ರಿಕೆಟ್​ನಿಂದ ಸ್ವಲ್ಪ ದಿನ ದೂರ ಉಳಿಯಲಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಪಂತ್ ಸ್ಥಾನ ಪಡೆದಿರಲಿಲ್ಲ. ಮೊಣಕಾಲು ಗಾಯದಿಂದ ಬಳಲುತ್ತಿದ್ದ ಪಂತ್​ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ಎನ್​ಸಿಎಗೆ ತೆರಳುವಂತೆ ಬಿಸಿಸಿಐ ಹೇಳಿತ್ತು. ಇದೀಗ ಈ ಘಟನೆಯ ನಂತರ ಪಂತ್ ಸಂಕಷ್ಟ ಮತ್ತಷ್ಟು ಹೆಚ್ಚಿದೆ.

ಮಾಜಿ ಕ್ರಿಕೆಟಿಗರ ಹಾರೈಕೆ

ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂತಲೇ ಬಿಂಬಿತರಾಗಿರುವ ಪಂತ್​ ಅಪಘಾತಕ್ಕೀಡಾಗಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಕೂಡ ಈ ಸುದ್ದಿಯಿಂದ ಶಾಕ್​ಗೆ ಒಳಗಾಗಿದ್ದು ರಿಷಬ್ ಪಂತ್ ಬೇಗ ಗುಣಮುಖರಾಗಲಿ ಎಂದು ಟ್ವೀಟರ್​ನಲ್ಲಿ ಹಾರೈಸಿದ್ದಾರೆ.

ಸೂಚನೆ ನೀಡಿದ ಮುಖ್ಯಮಂತ್ರಿ

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪಂತ್ ಬಗ್ಗೆ ಮಾಹಿತಿ ಪಡೆದಿದ್ದು, ಪಂತ್ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಗತ್ಯವಿದ್ದರೆ ಏರ್ ಆಂಬ್ಯುಲೆನ್ಸ್ ಕೂಡ ಒದಗಿಸಬೇಕು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:27 am, Fri, 30 December 22