Riyan Parag: 8 ಎಸೆತಗಳಲ್ಲಿ ಟೀಕಾಗಾರರ ಬಾಯಿ ಮುಚ್ಚಿಸಿದ ರಿಯಾನ್ ಪರಾಗ್
Riyan Parag: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅದರಲ್ಲೂ ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆಯ ಬದಲಿಗೆ ಪರಾಗ್ಗೆ ಚಾನ್ಸ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಪರಾಗ್ ಆಯ್ಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಲಾಗಿತ್ತು. ಆದರೆ ಭರ್ಜರಿ ಪ್ರದರ್ಶನದ ಮೂಲಕ ರಿಯಾನ್ ಪರಾಗ್ ಟೀಕಾಗಾರರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರುವಾರಿಗಳಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಏಕೆಂದರೆ ಭಾರತ ತಂಡ ನೀಡಿದ 213 ರನ್ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 14 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿ ಸುಸ್ಥಿತಿಯಲ್ಲಿತ್ತು. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಕೊನೆಯ 6 ಓವರ್ಗಳು ನಿರ್ಣಾಯಕವಾಗಿತ್ತು. ಈ ಹಂತದಲ್ಲಿ 15ನೇ ಓವರ್ ಎಸೆದ ಅಕ್ಷರ್ ಪಟೇಲ್ 2 ವಿಕೆಟ್ ಕಬಳಿಸಿದರು. ಆ ಬಳಿಕ 16ನೇ ಓವರ್ನಲ್ಲಿ ರವಿ ಬಿಷ್ಣೋಯ್ 1 ವಿಕೆಟ್ ಪಡೆದರು.
ಇನ್ನು 17ನೇ ಓವರ್ ಮೂಲಕ ಚೊಚ್ಚಲ ವಿಕೆಟ್ ಪಡೆದ ರಿಯಾನ್ ಪರಾಗ್ ಹಿಂತಿರುಗಿ ನೋಡಿಲ್ಲ. ತಮ್ಮ ಮೊದಲ ಓವರ್ನಲ್ಲಿ ಕೇವಲ 5 ರನ್ ನೀಡಿ 1 ವಿಕೆಟ್ ಪಡೆದ ರಿಯಾನ್ ಬಳಿಕ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಈ ಮೂಲಕ ಕೇವಲ 8 ಎಸೆತಗಳಲ್ಲಿ 5 ರನ್ ನೀಡಿ 3 ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು.
ಈ ಮೂಲಕ ಶಿವಂ ದುಬೆ ಬದಲಿಗೆ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿದ್ದೇಕೆ ಎಂಬ ಟೀಕೆಗೆ ರಿಯಾನ್ ಪರಾಗ್ ಬೌಲಿಂಗ್ ಮೂಲಕವೇ ಉತ್ತರ ನೀಡಿದ್ದಾರೆ. ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ತಾನು ಪ್ರಬಲ ಆಕಾಂಕ್ಷಿ ಎಂಬುದನ್ನು ರಿಯಾನ್ ಪರಾಗ್ ತಮ್ಮ ಆಲ್ರೌಂಡರ್ ಪ್ರದರ್ಶನದ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಲಂಕಾ ವಿರುದ್ಧದ ಮುಂಬರುವ ಪಂದ್ಯಗಳಲ್ಲೂ ರಿಯಾನ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.