ಟೀಂ ಇಂಡಿಯಾ ವಿಜಯೋತ್ಸವ ಸಂಪನ್ನ: ಭಾರತ ತಂಡಕ್ಕೆ ಸಿಕ್ತು 125 ಕೋಟಿ ರೂ ಗಿಫ್ಟ್​

|

Updated on: Jul 04, 2024 | 10:22 PM

ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಅಭಿನಂದನಾ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ನಡೆದ ಓಪನ್ ಬಸ್ ಪರೇಡ್‌ನಲ್ಲಿ ಭಾರತದ ಆಟಗಾರರ ಜೊತೆ ಸಾವಿರಾರು ಅಭಿಮಾನಿಗಳು ಬೀದಿ ಬೀದಿಯಲ್ಲಿ ನೆರೆದಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ಕೂಡ ನೀಡಿದೆ.

ಟೀಂ ಇಂಡಿಯಾ ವಿಜಯೋತ್ಸವ ಸಂಪನ್ನ: ಭಾರತ ತಂಡಕ್ಕೆ ಸಿಕ್ತು 125 ಕೋಟಿ ರೂ ಗಿಫ್ಟ್​
ಭಾರತ ತಂಡಕ್ಕೆ ಸಿಕ್ತು 125 ಕೋಟಿ ರೂ ಗಿಫ್ಟ್​
Follow us on

ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ಭಾರತ ಕ್ರಿಕೆಟ್ ತಂಡ ಗುರುವಾರ ವಿಶೇಷ ವಿಮಾನದ ಮೂಲಕ ತವರಿಗೆ ಮರಳಿತು. ಸತತ ತುಂತುರು ಮಳೆ ಮತ್ತು ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ವಿಮಾನ ನಿಲ್ದಾಣದಲ್ಲಿ ಆಟಗಾರರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಕೆಲ ಗಂಟೆಗಳ ವಿಶ್ರಾಂತಿ ತೆಗೆದುಕೊಂಡು ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ನಂತರ ಮುಂಬೈ ತಲುಪಿದ್ದು, ತೆರೆದ ಬಸ್​ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆದಿದೆ. ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ನಡೆದ ಈ ಪರೇಡ್‌ನಲ್ಲಿ ಭಾರತದ ಆಟಗಾರರ ಜೊತೆ ಸಾವಿರಾರು ಅಭಿಮಾನಿಗಳು ಬೀದಿ ಬೀದಿಯಲ್ಲಿ ನೆರೆದಿದ್ದರು.

ಮೆರೈನ್ ಡ್ರೈವ್‌ನಲ್ಲಿ ತುಂಬಿ ತುಳುಕುತ್ತಿದ್ದ ಅಭಿಮಾನಿಗಳ ನಡುವೆ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವ ಪರೇಡ್ ಅದ್ಧೂರಿಯಾಗಿ ನಡೆಯಿತು. ವಿಕ್ಟರಿ ಪೆರೇಡ್ ವೀಕ್ಷಿಸಲು ಮೆರೈನ್ ಡ್ರೈವ್‌ನಲ್ಲಿ ಅಭಿಮಾನಿಗಳ ದಂಡೇ ಸೇರಿದ್ದರಿಂದ ಇಡೀ ರಸ್ತೆ ಜಾಮ್ ಆಗಿತ್ತು. ಸತತ ಮಳೆಯ ನಡುವೆಯೂ ಅಭಿಮಾನಿಗಳು ತಮ್ಮ ನಾಯಕನನ್ನು ಕಣ್ತುಂಬಿಕೊಂಡರು. ಅಭಿಮಾನಿಗಳ ಎದುರು ವಿರಾಟ್ ಕೊಹ್ಲಿ ಭಾರತದ ಧ್ವಜ ಹಾರಿಸಿ, ರೋಹಿತ್ ಶರ್ಮಾ ಅವರನ್ನು ಕರೆದು ಜೊತೆಯಾಗಿ ಟ್ರೋಫಿ ಎತ್ತಿ ತೋರಿಸಿದರು.

ಇದನ್ನೂ ಓದಿ: ವಿಶ್ವಕಪ್ ಹಿಡಿಯುವ ಬದಲಾಗಿ ಕಪ್ ಗೆದ್ದು ತಂದವರ ಕೈ ಹಿಡಿದ ಮೋದಿ: ಫೋಟೋ ವೈರಲ್

ವಾಂಖೆಡೆ ತಲುಪಿದಾದ ಹೌಸ್​ಫುಲ್ ಆಗಿದ್ದ ಸ್ಟೇಡಿಯಂನಲ್ಲಿ ರೋಹಿತ್, ಕೊಹ್ಲಿ, ಹಾರ್ದಿಕ್ ಕೂಗು ಜೋರಾಗಿತ್ತು. ಇಡೀ ಸ್ಟೇಡಿಯಂ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿತು. ಬಳಿಕ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ”ಈ ಟ್ರೋಫಿ ನಮ್ಮ ದೇಶಕ್ಕಾಗಿ. ಕಳೆದ 11 ವರ್ಷಗಳಿಂದ ಅಭಿಮಾನಿಗಳು ಭಾರತಕ್ಕೆ ಟ್ರೋಫಿಯನ್ನು ಮರಳಿ ತರಲು ಬಯಸಿದ್ದರು. ನನ್ನ ತಂಡ ಮತ್ತು ಬಿಸಿಸಿಐ ಪರವಾಗಿ, ನಾನು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರತಿಯೊಂದು ವಿಶ್ವಕಪ್ ಗೆಲುವು ವಿಶೇಷವಾಗಿರುತ್ತದೆ. ಟಿ20 ವಿಶ್ವಕಪ್ ಗೆಲ್ಲುವುದು ಹೇಗೆ ಎಂದು ಜಗತ್ತಿಗೆ ತೋರಿಸಿದ್ದೇವೆ,” ಎಂದು ಹೇಳಿದರು. ಇದೇವೇಳೆ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಅನ್ನು ಪ್ರಶಂಸಿಸಿದರು.

ನಂತರ ಮಾತನಾಡಿದ ಕೊಹ್ಲಿ, ”ಫೈನಲ್ ಪಂದ್ಯದ ಕೊನೆಯ ಐದು ಓವರ್‌ಗಳಲ್ಲಿ ನಡೆದದ್ದು ವಿಶೇಷ. ನಮ್ಮನ್ನು ಮತ್ತೆ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡಿದ ವ್ಯಕ್ತಿಯನ್ನು ಎಲ್ಲರೂ ಶ್ಲಾಘಿಸಬೇಕೆಂದು ನಾನು ಬಯಸುತ್ತೇನೆ. ದಯವಿಟ್ಟು ಜಸ್ಪ್ರೀತ್ ಬುಮ್ರಾಗೆ ಚಪ್ಪಾಳೆ ಬರಲಿ. ಕೊನೆಯ ಐದು ಓವರ್‌ಗಳಲ್ಲಿ ಅವರು ಮಾಡಿದ್ದು ಅದ್ಭುತವಾಗಿದೆ. ಬುಮ್ರಾ ಒಂದು ಪೀಳಿಗೆಯ ಆಟಗಾರ. ನಾವು 2011 ರಲ್ಲಿ ವಿಶ್ವಕಪ್ ಗೆದ್ದಾಗ ಕಣ್ಣೀರು ಇತ್ತು. ಆಗ ನಾನು ಚಿಕ್ಕವನಾಗಿದ್ದೆ. ಆದರೆ, ಈಗ ಹಿರಿಯ ಆಟಗಾರನಾಗಿ ರೋಹಿತ್ ಜೊತೆಗೆ, ಇಷ್ಟು ದಿನ ಆಡಿದ್ದು ವಿಶೇಷವಾಗಿತ್ತು. ಮೈದಾನದಲ್ಲಿ ರೋಹಿತ್ ಅಷ್ಟೊಂದು ಭಾವುಕತೆಯನ್ನು ತೋರಿಸಿದ್ದು ಇದೇ ಮೊದಲು. ಆ ಘಳಿಗೆಯಲ್ಲಿ ನಾನು ಅಳುತ್ತಿದ್ದೆ, ರೋಹಿತ್ ಕೂಡ ಅಳುತ್ತಿದ್ದ. ಅದೊಂದು ವಿಶೇಷ ಕ್ಷಣ,” ಎಂದು ನೆನಪಿಸಿಕೊಂಡರು. ಈ ಸಮಾರಂಭದಲ್ಲಿ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನು ಟೀಮ್ ಇಂಡಿಯಾಕ್ಕೆ ವಿತರಿಸಿತು.

ತಡವಾಗಿ ಆರಂಭಗೊಂಡ ಮೆರವಣಿಗೆ:

ಮಧ್ಯಾಹ್ನ 2 ಗಂಟೆಗೇ ಆಟಗಾರರು ಮುಂಬೈಗೆ ತೆರಳಿದ್ದರು. ಆದರೆ, ಭಾರತ ಟಿ20 ವಿಶ್ವಚಾಂಪಿಯನ್ ತಂಡ ತಡವಾಗಿ ಆಗಮಿಸಿದ್ದರಿಂದ ಮರೀನ್ ಡ್ರೈವ್‌ನಲ್ಲಿ ವಿಜಯಯಾತ್ರೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಅಧಿಕಾರಿಗಳು ಮೊದಲು ಹಂಚಿಕೊಂಡ ವೇಳಾಪಟ್ಟಿಯ ಪ್ರಕಾರ, ವಿಶ್ವ ಚಾಂಪಿಯನ್ ತಂಡದ ವಿಜಯೋತ್ಸವದ ಮೆರವಣಿಗೆಯು ರಾಷ್ಟ್ರೀಯ ಪ್ರದರ್ಶನ ಕಲೆಗಳ ಕೇಂದ್ರದಿಂದ (ಎನ್‌ಸಿಪಿಎ) ಸಂಜೆ 5 ಗಂಟೆಗೆ ಪ್ರಾರಂಭವಾಗಿ ಸಂಜೆ 7 ಗಂಟೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ತಂಡವು ಇಲ್ಲಿಗೆ ತಡವಾಗಿ ತಲುಪಿದ ಕಾರಣ ವಿಜಯೋತ್ಸವದ ಮೆರವಣಿಗೆ ಆರಂಭವಾಗುವಾಗಲೇ 7:30 ಆಗಿತ್ತು.

ಇನ್ನು ಬಾರ್ಬಡೋಸ್‌ನಲ್ಲಿ ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡವು ಪ್ರಶಸ್ತಿ ಗೆದ್ದ ತಕ್ಷಣ ತವರಿಗೆ ಮರಳಲು ಸಾಧ್ಯವಾಗಲಿಲ್ಲ. ಆಟಗಾರರು ತಮ್ಮ ಹೋಟೆಲ್‌ನಲ್ಲಿ ಉಳಿದುಕೊಂಡರು, ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹಿಂತಿರುಗಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದರು. ಏರ್ ಇಂಡಿಯಾದ ವಿಶೇಷ ವಿಮಾನ AIC24WC ‘ಏರ್ ಇಂಡಿಯಾ ಚಾಂಪಿಯನ್ಸ್ 24 ವಿಶ್ವಕಪ್’ ಬುಧವಾರ ಬೆಳಗ್ಗೆ 4:50 IST ಕ್ಕೆ ಬಾರ್ಬಡೋಸ್‌ನಿಂದ ಹೊರಟು 16 ಗಂಟೆಗಳ ಪ್ರಯಾಣದ ನಂತರ ಗುರುವಾರ ಬೆಳಿಗ್ಗೆ 6 ಗಂಟೆಗೆ (ಭಾರತೀಯ ಕಾಲಮಾನ) ದೆಹಲಿಯನ್ನು ತಲುಪಿದರು.

ವರದಿ: ವಿನಯ್ ಭಟ್

ಮತ್ತಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ