ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರದಿಂದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಈಗಾಗಲೇ ಉಭಯ ತಂಡಗಳು ದೆಹಲಿಗೆ ತಲುಪಿ ಅಭ್ಯಾಸ ಕೂಡ ಶುರುಮಾಡಿಕೊಂಡಿದೆ. ಇಂಡೋ- ಆಸೀಸ್ ಮೊದಲ ಟೆಸ್ಟ್ ಎರಡುವರೆ ದಿನಕ್ಕೇ ಮುಕ್ತಾಯಗೊಂಡಿತ್ತು. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸ್ಪಿನ್ ದಾಳಿಗೆ ನಲುಗಿದ ಕಾಂಗರೂ ಪಡೆ ಹೀನಾಯ ಪ್ರದರ್ಶನ ತೋರಿತು. ರೋಹಿತ್ (Rohit Sharma) ಪಡೆ ಇನ್ನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಜಯದೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಟೀಮ್ ಇಂಡಿಯಾ ಇಂದು ಕೊನೆಯ ಅಭ್ಯಾಸ ನಡೆಸಲಿದೆ. ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರೆ ವಿರಾಟ್ ಕೊಹ್ಲಿ ಸ್ಲಿಪ್ನಲ್ಲಿ ಕ್ಯಾಚಿಂಗ್ ಪ್ರ್ಯಾಕ್ಟೀಸ್ ನಡೆಸಿದರು. ವಿಶೇಷ ಎಂದರೆ, ಕೊಹ್ಲಿ ಅವರು ತಂಡದ ಸಹ ಆಟಗಾರರು ಅಂಗಳಕ್ಕೆ ಬರುವ ಅರ್ಧ ಗಂಟೆ ಮುಂಚಿತವಾಗಿಯೇ ಕ್ರೀಡಾಂಗಣಕ್ಕೆ ಬಂದಿದ್ದರು. ಕ್ಯಾಚಿಂಗ್ ಪ್ರ್ಯಾಕ್ಟೀಸ್ ಜೊತೆಗೆ ನೆಟ್ಸ್‌ನಲ್ಲಿ ಅಧಿಕ ಸಮಯ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂತು. ಕೆಲಹೊತ್ತು ವೇಗದ ಬೌಲರ್‌ಗಳನ್ನು ಎದುರಿಸಿದ ಬಳಿಕ ಸ್ಪಿನ್ನರ್‌ಗಳಿಗೆ ಬೌಲ್ ಮಾಡುವಂತೆ ಸೂಚಿಸಿದರು.
ಶ್ರೇಯಸ್ ಅಯ್ಯರ್ ಕಮ್ಬ್ಯಾಕ್:
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಬೆನ್ನು ನೋವಿನ ಕಾರಣ ಶ್ರೇಯಸ್ ಅಯ್ಯರ್ ತಂಡದಿಂದ ಹೊರಗುಳಿದಿದ್ದರು. ಅಲ್ಲದೆ ಕಳೆದ ಒಂದು ವಾರದಿಂದ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಹೊರಗುಳಿದಿದ್ದ ಕಾರಣ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಅಯ್ಯರ್ ಅವರ ಆಗಮನದೊಂದಿಗೆ 2ನೇ ಪಂದ್ಯದ ಪ್ಲೇಯಿಂಗ್ ಇಲೆವೆನ್ನಿಂದ ಸೂರ್ಯಕುಮಾರ್ ಹೊರಗುಳಿಯುವ ಸಾಧ್ಯತೆಯಿದೆ.
Virat Kohli: ನಾನಾ-ನೀನಾ…ಗಂಗೂಲಿಗೆ ಪಾಠ ಕಲಿಸಲು ಮುಂದಾಗಿದ್ದ ವಿರಾಟ್ ಕೊಹ್ಲಿ..!
ಈ ಬಗ್ಗೆ ಕೋಚ್ ದ್ರಾವಿಡ್ ಮಾಹಿತಿ ನೀಡದ್ದು, ”ಶ್ರೇಯಸ್ ಅಯ್ಯರ್ ಅವರು ಪೂರ್ಣ ಫಿಟ್‌ನೆಸ್ ಹೊಂದಿದರೆ ಅಂತಿಮ ಇಲೆವೆನ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಬುಧವಾರ ಕೆಲಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಗುರುವಾರದ ಅಭ್ಯಾಸದ ಬಳಿಕ ಅವರ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್ಗೆ ಅಗ್ನಿಪರೀಕ್ಷೆ?:
ದ್ವಿತೀಯ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಅವರ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಕಳೆದ ಕೆಲ ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಇನ್ಫಾರ್ಮ ಆಟಗಾರ ಶುಭ್ಮನ್ ಗಿಲ್ ಅವರನ್ನು ಹೊರಗಿಟ್ಟು ರಾಹುಲ್ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ಕೇವಲ 20 ರನ್ಗಳಿಸಿ ನಿರಾಸೆ ಮೂಡಿಸಿದ್ದರು. ಇದರ ಬೆನ್ನಲ್ಲೇ 2ನೇ ಟೆಸ್ಟ್ ಪಂದ್ಯದಿಂದ ರಾಹುಲ್ ಅವರನ್ನು ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಇದಾಗ್ಯೂ ಮತ್ತೊಂದು ಅವಕಾಶ ನೀಡಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ದ್ರಾವಿಡ್ ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಾರಿ ಕೂಡ ವಿಫಲರಾದರೆ ಮುಂದಿನ 2 ಟೆಸ್ಟ್ ಪಂದ್ಯಗಳಲ್ಲಿ ಗಿಲ್ ಇವರ ಸ್ಥಾನನ ತುಂಬಲಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್ , ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ