ICC Womens T20 World Cup 2023: ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸಿದ ಟೀಮ್ ಇಂಡಿಯಾ
India Women vs West Indies Women: 119 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾದ ಶಫಾಲಿ ವರ್ಮಾ 28 ರನ್ ಬಾರಿಸಿದರೆ, ಸ್ಮೃತಿ ಮಂಧಾನ 10 ರನ್ಗಳಿಸಿ ಔಟಾದರು.
ICC Womens T20 World Cup 2023: ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು 2ನೇ ಜಯ ಸಾಧಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದರು.
ಪಂದ್ಯದ 2ನೇ ಓವರ್ನಲ್ಲಿ ಪೂಜಾ ವಸ್ತ್ರಾಕರ್ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ 2ನೇ ವಿಕೆಟ್ಗೆ ಜೊತೆಯಾದ ಎಸ್ ಟೇಲರ್ (42) ಹಾಗೂ ಕ್ಯಾಂಪ್ಬೆಲ್ಲೆ (30) 73 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್ನಲ್ಲಿ ಬದಲಾವಣೆ ಮಾಡಿದರು.
ಪರಿಣಾಮ ದೀಪ್ತಿ ಶರ್ಮಾ ಟೇಲರ್ ಹಾಗೂ ಕ್ಯಾಪ್ಬೆಲ್ಲೆ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಮೇಲುಗೈ ಹೊಂದಿದ ಟೀಮ್ ಇಂಡಿಯಾ, ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ವೆಸ್ಟ್ ಇಂಡೀಸ್ ವನಿತೆಯರು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ಗಳಿಸಲಷ್ಟೇ ಶಕ್ತರಾದರು.
119 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾದ ಶಫಾಲಿ ವರ್ಮಾ 28 ರನ್ ಬಾರಿಸಿದರೆ, ಸ್ಮೃತಿ ಮಂಧಾನ 10 ರನ್ಗಳಿಸಿ ಔಟಾದರು. ಆ ಬಳಿಕ ಬಂದ ಜೆಮಿಮಾ 1 ರನ್ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
42 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ, ರಿಷಾ ಘೋಷ್ 32 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿ ತಂಡವನ್ನು ಗುರಿ ಮುಟ್ಟಿಸಿದರು. ಅದರಂತೆ 18.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ 2ನೇ ಜಯವನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಟೀಮ್ ಇಂಡಿಯಾ ಸೋಲಿಸಿತ್ತು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರಾಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ದೇವಿಕಾ ವೈದ್ಯ , ರಾಧಾ ಯಾದವ್ , ರಾಜೇಶ್ವರಿ ಗಾಯಕ್ವಾಡ್ , ರೇಣುಕಾ ಠಾಕೂರ್ ಸಿಂಗ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್ (ನಾಯಕಿ) , ಸ್ಟಾಫನಿ ಟೇಲರ್ , ಶೆಮೈನ್ ಕ್ಯಾಂಪ್ಬೆಲ್ಲೆ , ಶಬಿಕಾ ಗಜ್ನಾಬಿ , ಚಿನೆಲ್ಲೆ ಹೆನ್ರಿ , ಚೆಡಿಯನ್ ನೇಷನ್ , ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್) , ಅಫಿ ಫ್ಲೆಚರ್ , ಶಾಮಿಲಿಯಾ ಕಾನ್ನೆಲ್ , ಷಕೇರಾ ಸೆಲ್ಮನ್ , ಕರಿಷ್ಮಾ ರಾಮ್ಹರಕ್.