ಐಸಿಸಿ ಟೂರ್ನಿಯಲ್ಲಿ 8 ವರ್ಷಗಳ ಬಳಿಕ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಮತ್ತೊಮ್ಮೆ ಕಮರಿದೆ. ಇದೀಗ ಭಾರತ ಮುಂದಿನ ಸರಣಿಗಾಗಿ ತಯಾರಿ ಆರಂಭಿಸಬೇಕಿದೆ. ಈಗಾಗಲೇ ಟೀಮ್ ಇಂಡಿಯಾ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ನೇಮಕವಾಗಿದ್ದು, ಶೀಘ್ರದಲ್ಲೇ ಹೊಸ ನಾಯಕನ ಆಯ್ಕೆ ಕೂಡ ನಡೆಯಲಿದೆ. ಇದೇ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್, ಶೀಘ್ರದಲ್ಲೇ ಭಾರತ ಕ್ರಿಕೆಟ್ನಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿರುವ ಗಂಭೀರ್, ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಮುಂದಾಳ್ವತದಲ್ಲಿ ಭಾರತ ತಂಡವು ಐಸಿಸಿ ಪ್ರಶಸ್ತಿ ಜಯಿಸಲಿದೆ ಎಂದು ಭಾವಿಸುತ್ತೇನೆ. ತಂಡದ ಕೋಚ್ ಆಗಿ ದ್ರಾವಿಡ್ ಅವರ ಆಗಮನ ಹಾಗೂ ಐಪಿಎಲ್ನ ಯಶಸ್ವಿ ನಾಯಕ ರೋಹಿತ್ ಶರ್ಮಾ ತಂಡದ ನಾಯಕತ್ವ ನೀಡುವುದರಿಂದ ಶೀಘ್ರದಲ್ಲೇ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದರ ಬೆನ್ನಲ್ಲೇ ಏಕದಿನ ವಿಶ್ವಕಪ್ ಕೂಡ ಜರುಗಲಿದೆ. ಹೀಗಾಗಿ ಇದರಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಗೌತಮ್ ಗಂಭೀರ್. ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಲಿದೆ. ಈ ಸರಣಿಯೊಂದಿಗೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಈ ಹಿಂದೆ ರಾಹುಲ್ ದ್ರಾವಿಡ್ ಅಂಡರ್-19 ತಂಡದ ಕೋಚ್ ಆಗಿದ್ದ ವೇಳೆ, ಕಿರಿಯರ ಟೀಮ್ ಇಂಡಿಯಾ ಎರಡು ಬಾರಿ ಫೈನಲ್ ಪ್ರವೇಶಿಸಿತ್ತು ಎಂಬುದು ವಿಶೇಷ. 2016 ರಲ್ಲಿ ಇಶಾನ್ ಕಿಶನ್ ನೇತೃತ್ವದಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿ ವೆಸ್ಟ್ ಇಂಡೀಸ್ ವಿರುದ್ದ ಸೋಲನುಭವಿಸಿತ್ತು. ಇದಾದ ಬಳಿಕ, 2018ರಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದ ಪೃಥ್ವಿ ಶಾ ನೇತೃತ್ವದ ಅಂಡರ್ 19 ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿತು. ಇದೀಗ ಅಂದು ದ್ರಾವಿಡ್ ಗರಡಿಯಲ್ಲಿ ಪಳಗಿದ ಯುವ ಆಟಗಾರರೇ ಟೀಮ್ ಇಂಡಿಯಾದಲ್ಲಿದ್ದಾರೆ. ಹೀಗಾಗಿ ದ್ರಾವಿಡ್ ಸಾರಥ್ಯದಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Rohit Sharma And Rahul Dravid Win An ICC Tournament Very Soon – Gautam Gambhir)
Published On - 5:04 pm, Mon, 8 November 21