T20 World Cup 2021: ಟೀಮ್ ಇಂಡಿಯಾ ಸೋಲಿಗೆ ಇವರೇ ಕಾರಣ ಎಂದ ಸುನಿಲ್ ಗವಾಸ್ಕರ್
Team India: ಪವರ್‌ಪ್ಲೇ ಸ್ಟ್ರಾಟಜಿಯನ್ನು ಬದಲಿಸುವಂತೆ ಗವಾಸ್ಕರ್ ಸಲಹೆ ನೀಡಿದರು. ಏಕೆಂದರೆ ಮೊದಲ ಆರು ಓವರ್‌ಗಳಲ್ಲಿ ಕೇವಲ ಇಬ್ಬರು ಫೀಲ್ಡರ್‌ಗಳು 30 ಯಾರ್ಡ್‌ಗಳ ಹೊರಗೆ ಇದ್ದಾರೆ ಎಂಬುದು ಸತ್ಯ.
ಟಿ20 ವಿಶ್ವಕಪ್ (T20 World Cup 2021) ಆರಂಭಕ್ಕೂ ಮುನ್ನ ಬಲಿಷ್ಠರು ಎಂದೇ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಲೀಗ್ ಹಂತದಿಂದಲೇ ಹೊರಬಿದ್ದಿದೆ. ಈ ಮೂಲಕ 9 ವರ್ಷಗಳ ಬಳಿಕ ನಾಕೌಟ್ ಹಂತ ತಲುಪದೇ ಭಾರತ ತಂಡದ ಐಸಿಸಿ ಟೂರ್ನಿಯಿಂದ ಹೊರನಡೆದಿದೆ. ಇಂತಹ ಕಳಪೆ ಪ್ರದರ್ಶನಕ್ಕೆ ಟೀಮ್ ಇಂಡಿಯಾ ಬ್ಯಾಟರುಗಳೇ ಕಾರಣ ಎಂದು ಆರೋಪಿಸಿದ್ದಾರೆ ಟೀಮ್ ಇಂಡಿಯಾ ದಂತಕಥೆ ಸುನಿಲ್ ಗವಾಸ್ಕರ್.
ಈ ಬಗ್ಗೆ ಮಾತನಾಡಿರುವ ಗವಾಸ್ಕರ್, ಬಲಿಷ್ಠ ತಂಡಗಳ ವಿರುದ್ಧ ರನ್ ಗಳಿಸುವಲ್ಲಿ ಭಾರತೀಯ ಬ್ಯಾಟರುಗಳ ವೈಫಲ್ಯವೇ 2021ರ ಟಿ20 ವಿಶ್ವಕಪ್‌ನಿಂದ ತಂಡವು ಬೇಗನೆ ನಿರ್ಗಮಿಸಲು ಪ್ರಮುಖ ಕಾರಣ. ಇನ್ಮುಂದೆಯಾದರೆ ಪವರ್‌ಪ್ಲೇ ಓವರ್‌ಗಳಲ್ಲಿ ತಂಡವು ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಸೂಪರ್ 12 ರ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತ ಸೆಮಿಫೈನಲ್ ರೇಸ್‌ನಿಂದ ಹೊರಬಿತ್ತು. ಆದಾಗ್ಯೂ, ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಭಾರತವು ಅಫ್ಘಾನಿಸ್ತಾನದ ವಿರುದ್ಧ ಅದ್ಭುತ ಕಂಬ್ಯಾಕ್ ಮಾಡಿತ್ತು. ಆ ಬಳಿಕ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಂಡಿತ್ತು. ಆದರೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಸೋಲುವುದರೊಂದಿಗೆ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ ಪ್ರವೇಶಿಸುವ ಟೀಮ್ ಇಂಡಿಯಾ ಕನಸು ಕಮರಿತು.
ತಂಡದ ಒಟ್ಟಾರೆ ಪ್ರದರ್ಶನವನ್ನು ವಿಶ್ಲೇಷಿಸಿರುವ ಸುನಿಲ್ ಗವಾಸ್ಕರ್ “ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಬೌಲರ್‌ಗಳು ನಮ್ಮ ಬ್ಯಾಟರುಗಳ ಮುಂದೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಟೀಮ್ ಇಂಡಿಯಾ ಬ್ಯಾಟರುಗಳನ್ನು ಮುಕ್ತವಾಗಿ ಆಡಲು ಬಿಡಲಿಲ್ಲ. ಇನ್ನೊಂದೆಡೆ ಇಬ್ಬನಿಯಿಂದಾಗಿ (ಎರಡನೇ ಇನಿಂಗ್ಸ್‌ನಲ್ಲಿ) ಚೆಂಡು ತಿರುಗದ ಕಾರಣ ಎದುರಾಳಿಗಳಿಗೆ ಬ್ಯಾಟಿಂಗ್ ಸುಲಭವಾಯಿತು.
ಆದರೆ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರುಗಳು 180 ರನ್ ಗಳಿಸಿದ್ದರೆ, ಬೌಲರುಗಳಿಗೂ ಅವಕಾಶ ಇರುತ್ತಿತ್ತು. ನೀವು ಕೇವಲ 111 (ನ್ಯೂಜಿಲೆಂಡ್ ವಿರುದ್ಧ) ರನ್ಗಳಿಸಿದಾಗ ಹೆಚ್ಚಿನ ಇಬ್ಬನಿ ಇರಲಿಲ್ಲ. ಅಂದರೆ ಇದು ಬ್ಯಾಟರುಗಳ ವೈಫಲ್ಯವೇ ಹೊರತು ಬೇರೇನೂ ಅಲ್ಲ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.
ಇದೇ ವೇಳೆ ತಂಡದ ಪವರ್‌ಪ್ಲೇ ಸ್ಟ್ರಾಟಜಿಯನ್ನು ಬದಲಿಸುವಂತೆ ಗವಾಸ್ಕರ್ ಸಲಹೆ ನೀಡಿದರು. ಏಕೆಂದರೆ ಮೊದಲ ಆರು ಓವರ್‌ಗಳಲ್ಲಿ ಕೇವಲ ಇಬ್ಬರು ಫೀಲ್ಡರ್‌ಗಳು 30 ಯಾರ್ಡ್‌ಗಳ ಹೊರಗೆ ಇದ್ದಾರೆ ಎಂಬುದು ಸತ್ಯ. ಆದರೆ ಕಳೆದ ಕೆಲವು ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಇದರ ಲಾಭವನ್ನು ಪಡೆದಿಲ್ಲ ಎಂಬುದು ಅಷ್ಟೇ ಸತ್ಯ. ಹೀಗಾಗಿ ಇನ್ಮುಂದೆ ಪವರ್ಪ್ಲೇನಲ್ಲಿ ಆಡುವ ಮನಸ್ಥಿತಿ ಕೂಡ ಬದಲಾಗಬೇಕು ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(T20 World Cup 2021: Sunil Gavaskar blames batters for Indias exit from ICC event)