ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಏಕದಿನ ಸರಣಿ ಮುಕ್ತಾಯಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಆದರೆ ಈ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಇನ್ನುಳಿದ ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದರು. ಇದೀಗ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಆದರೆ ಈ ಸರಣಿಯಿಂದಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಅಂದರೆ ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಇಬ್ಬರು ಹಿರಿಯ ಆಟಗಾರರಿಗೆ ದೀರ್ಘಾವಧಿಯ ವಿಶ್ರಾಂತಿ ನೀಡಲಾಗಿದೆ.
ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಮತ್ತೆ ಕಣಕ್ಕಿಳಿಯುವುದು ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಸಿಕ್ಕ ಉತ್ತರ ಆಗಸ್ಟ್ 24. ಅಂದರೆ ಏಷ್ಯಾಕಪ್ಗೂ ಮುನ್ನ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ತಂಡಕ್ಕೆ 5 ದಿನಗಳ ವಿಶೇಷ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಈ ಶಿಬಿರದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಅದುವರೆಗೆ ಇಬ್ಬರು ದಿಗ್ಗಜರು ವಿಶ್ರಾಂತಿಯಲ್ಲಿದ್ದಾರೆ.
ಇನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ ಪಂದ್ಯವಾಡುವುದು ಪಾಕಿಸ್ತಾನ್ ವಿರುದ್ಧ ಎಂಬುದು ವಿಶೇಷ. ಅಂದರೆ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡುವುದು ಸೆಪ್ಟೆಂಬರ್ 2 ಎಂದು. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅದರಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮುಂದಿನ ಟಾರ್ಗೆಟ್ ಪಾಕಿಸ್ತಾನ್.
ಇದನ್ನೂ ಓದಿ: Virat Kohli: ಭರ್ಜರಿ ಸೆಂಚುರಿ ಸಿಡಿಸಿ 8 ದಾಖಲೆ ಬರೆದ ಕಿಂಗ್ ಕೊಹ್ಲಿ
Published On - 5:59 pm, Thu, 3 August 23