ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ವಿಂಡೀಸ್ ನೀಡಿದ 177 ರನ್ಗಳ ಟಾರ್ಗೆಟ್ ಅನ್ನು ಬೆನ್ತತ್ತಿದ ಟೀಮ್ ಇಂಡಿಯಾ (Team India) ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ (Ishan Kishan) ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್ಮ್ಯಾನ್ ವಿಂಡೀಸ್ ಬೌಲರುಗಳ ವಿರುದ್ದ ತಿರುಗಿಬಿದ್ದರು.
ಅದರಂತೆ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ಹಿಟ್ಮ್ಯಾನ್ ಸಚಿನ್ ತೆಂಡೂಲ್ಕರ್ ದಾಖಲೆಯೊಂದನ್ನು ಮುರಿದರು. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ದ 39 ಪಂದ್ಯಗಳಲ್ಲಿ ಸಚಿನ್ 1573 ರನ್ ಬಾರಿಸಿದ್ದರು. ಈ ಮೂಲಕ ವಿಂಡೀಸ್ ವಿರುದ್ದ ಅತೀ ಹೆಚ್ಚು ರನ್ ಬಾರಿಸಿದ ಭಾರತ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ 34 ಪಂದ್ಯಗಳಲ್ಲಿ ರೋಹಿತ್ ಶರ್ಮಾ 1583 ರನ್ ಬಾರಿಸುವ ಮೂಲಕ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 40 ಪಂದ್ಯಗಳಲ್ಲಿ 2243 ರನ್ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಈ ಸರಣಿಯಲ್ಲಿ ಹಿಟ್ಮ್ಯಾನ್ 200 ಕ್ಕೂ ಅಧಿಕ ರನ್ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದರೆ ವೆಸ್ಟ್ ಇಂಡೀಸ್ ವಿರುದ್ದ ತವರಿನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತದ ನಂಬರ್ 1 ಬ್ಯಾಟ್ಸ್ಮನ್ ಎನಿಸಿಕೊಳ್ಳಬಹುದು. ಸದ್ಯ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದ ಭಾರತದಲ್ಲಿ 20 ಪಂದ್ಯಗಳಿಂದ 1239 ರನ್ ಬಾರಿಸಿದ್ದಾರೆ. ಇದೀಗ 2ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 17 ಪಂದ್ಯಗಳಿಂದ 1100 ರನ್ ಕಲೆಹಾಕಿದ್ದು, ಈ ಸರಣಿಯ ಮೂಲಕ ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶ ಹಿಟ್ಮ್ಯಾನ್ ಮುಂದಿದೆ.
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 51 ಎಸೆತಗಳಲ್ಲಿ 60 ರನ್ ಬಾರಿಸುವ ಮೂಲಕ ಏಕದಿನ ತಂಡದ ನಾಯಕನಾಗಿ ಬ್ಯಾಟಿಂಗ್ನಲ್ಲಿ ಶುಭಾರಂಭ ಮಾಡಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ:
ಫೆಬ್ರವರಿ 6 – 1 ನೇ ODI, ಅಹಮದಾಬಾದ್
ಫೆಬ್ರವರಿ 9 – 2 ನೇ ODI, ಅಹಮದಾಬಾದ್
ಫೆಬ್ರವರಿ 11 – 3 ನೇ ODI, ಅಹಮದಾಬಾದ್
ಭಾರತ-ವೆಸ್ಟ್ ಇಂಡೀಸ್ T20 ಸರಣಿಯ ವೇಳಾಪಟ್ಟಿ:
ಫೆಬ್ರವರಿ 16 – 1 ನೇ T20, ಕೋಲ್ಕತ್ತಾ
ಫೆಬ್ರವರಿ 18 – 2 ನೇ T20, ಕೋಲ್ಕತ್ತಾ
ಫೆಬ್ರವರಿ 20 – 3 ನೇ T20, ಕೋಲ್ಕತ್ತಾ
(Rohit Sharma Breaks Sachin Tendulkar Record)