IND vs SL 2nd T20: ಭಾರತಕ್ಕೆ ದಾಖಲೆಯ 100ನೇ ಜಯ ತಂದಿಟ್ಟು ತಾನೂ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

| Updated By: Vinay Bhat

Updated on: Feb 27, 2022 | 7:34 AM

Rohit Sharma Record: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೀ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಟಿ20 ಕ್ರಿಕೆಟ್​ನಲ್ಲಿ 100ನೇ ಪಂದ್ಯ ಗೆದ್ದ ಸಾಧನೆ ಮಾಡಿತು. ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

IND vs SL 2nd T20: ಭಾರತಕ್ಕೆ ದಾಖಲೆಯ 100ನೇ ಜಯ ತಂದಿಟ್ಟು ತಾನೂ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ
Rohit Sharma Record IND vs SL T20
Follow us on

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ (India vs Sri Lanka) ಭರ್ಜರಿ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ (Shreyas Iyer), ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್​ಗಳ ಗೆಲುವು ಕಾಣುವ ಮೂಲಕ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ಭಾರತ ಟಿ20 ಕ್ರಿಕೆಟ್​ನಲ್ಲಿ 100ನೇ ಪಂದ್ಯ ಗೆದ್ದ ಸಾಧನೆ ಮಾಡಿತು. ಜೊತೆಗೆ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತವರಿನಲ್ಲಿ ಆಡಿದ 17 ಪಂದ್ಯಗಳಲ್ಲಿ ಭಾರತ 16 ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್​ನ ಇಯಾನ್ ಮಾರ್ಗನ್ ಮತ್ತು ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ದಾಖಲೆ ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.

ಇದರ ಜೊತೆಗೆ ಎರಡನೇ ಟಿ20 ಪಂದ್ಯ ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ನಾಯಕ ಎಂಬ ಪಟ್ಟ ಹಿಟ್​​ಮ್ಯಾನ್​ಗೆ ಸೇರಿದೆ. ಹಿಟ್​ಮ್ಯಾನ್ ಕೊಹ್ಲಿಗಿಂತ ಮೂರು ಪಂದ್ಯ ಮತ್ತು ಧೋನಿಗಿಂತ ಆರು ಪಂದ್ಯ ಅಧಿಕ ಗೆದ್ದ ಸಾಧನೆ ಮಾಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ಈವರೆಗೆ ಆಡಿದ 24 ಪಂದ್ಯಗಳ ಪೈಕಿ 22 ರಲ್ಲಿ ಜಯ ಸಾಧಿಸಿದೆ. ಇದೀಗ ಶ್ರೀಲಂಕಾ ವಿರುದ್ಧದ ಸರಣಿಯನ್ನೂ ವಶಪಡಿಸಿಕೊಂಡರು 11ನೇ ಬಾರಿ ಸರಣಿ ಗೆದ್ದ ಸಾಧನೆ ಮಾತ್ರವಲ್ಲದೆ, ಸತತವಾಗಿ ಮೂರನೇ ಬಾರಿ ಸರಣಿ ವಶಪಡಿಸಿಕೊಂಡ ದಾಖಲೆ ಬರೆದಿದ್ದಾರೆ.

ಇದಿಷ್ಟೆ ಅಲ್ಲದೆ ಪಾಕಿಸ್ತಾನ ಕ್ರಿಕೆಟ್​​ ತಂಡ ಟಿ20 ಯಲ್ಲಿ ಮಾಡಿರುವ ಸಾಧನೆ ಸಾಲಿಗೆ ಸೇರಿದೆ. ಟಿ20 ಕ್ರಿಕೆಟ್​​ನಲ್ಲಿ ಪಾಕ್​ ತಂಡ ಇಲ್ಲಿಯವರೆಗೆ 189 ಪಂದ್ಯಗಳಿಂದ 117 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, 100ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ತಂಡವಾಗಿದೆ. ಇದೀಗ ಭಾರತ 158 ಪಂದ್ಯಗಳಿಂದ 100 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದೆ. ಇನ್ನು ತವರಿನಲ್ಲಿ ನ್ಯೂಜಿಲೆಂಡ್ ತಂಡ ನಿರ್ಮಿಸಿರುವ ಸಾಧನೆಯ ಸಾಲಿಗೆ ಸೇರಿದೆ. ನ್ಯೂಜಿಲೆಂಡ್​ ತಂಡ ತವರಿನಲ್ಲೇ 73 ಪಂದ್ಯಗಳನ್ನಾಡಿದ್ದು ಇದರಲ್ಲಿ 39ರಲ್ಲಿ ಗೆಲುವು ದಾಖಲು ಮಾಡಿದೆ. ಭಾರತ ಆಡಿರುವ 60 ಪಂದ್ಯಗಳಿಂದ 39 ಪಂದ್ಯಗಳಲ್ಲಿ ಜಯ ಸಾಧಿಸಿ ಜಂಟಿ ಸ್ಥಾನ ಹಂಚಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಎದುರಾಳಿ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ 75 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟರೆ, ಮತ್ತೋರ್ವ ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ 38 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ದಸುನ್ ಶನಕ 19 ಎಸೆತಗಳಲ್ಲಿ 47 ರನ್ ಚಚ್ಚುವುದರ ಮೂಲಕ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅವರನ್ನು ವೇಗವಾಗಿ ಪೆವಿಲಿಯನ್ ಕಡೆಗೆ ಕಳುಹಿಸಿದ ಶ್ರೀಲಂಕಾ ಬೌಲಿಂಗ್ ಪಡೆ ನಂತರ ಮಂಕಾಯಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 74 ರನ್ ಬಾರಿಸಿ ಅಜೇಯರಾಗಿ ಉಳಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 25 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 18 ಎಸೆತಗಳಲ್ಲಿ ಅಜೇಯ 45 ರನ್ ಕಲೆ ಹಾಕಿದರು. ಈ ಮೂಲಕ ಭಾರತ 17.1 ಓವರ್‌ಗಳಲ್ಲಿಯೇ 186 ರನ್ ಬಾರಿಸುವುದರ ಮೂಲಕ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ವಿಜಯ ಪತಾಕೆಯನ್ನು ಹಾರಿಸಿತು.

IPL 2022: ಐಪಿಎಲ್ ಆರಂಭಕ್ಕೂ ಮುನ್ನ ಡ್ರೈವರ್ ಅವತಾರ ತಾಳಿದ ಧೋನಿ! ಮಹೀ ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ