Rohit Sharma: ಸರಣಿ ಗೆದ್ದ ಖುಷಿಯಲ್ಲಿ ಮಹತ್ವದ ಮಾಹಿತಿ ಹೇಳಿಕೊಂಡ ರೋಹಿತ್ ಶರ್ಮಾ: ಏನಂದ್ರು ಕೇಳಿ
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ನಾಯಕ ರೋಹಿತ್ ಶರ್ಮಾ ಕೂಡ ನಾಯಕನಾಗಿ ವಿಶ್ವ ದಾಖಲೆ ನಿರ್ಮಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್ಮ್ಯಾನ್ ಕೆಲವೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ (IND vs SL 2nd T20) ಟಿ20 ಕ್ರಿಕೆಟ್ ಇತಿಹಾಸದಲ್ಲಿ 100ನೇ ಪಂದ್ಯ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿದೆ. ಗೆಲ್ಲಲು 184 ರನ್ ಗುರಿ ಬೆನ್ನಟ್ಟಿದ ಭಾರತವು 17.1 ಓವರ್‌ಗಳಲ್ಲಿ 186 ರನ್ ಗಳಿಸಿತು. ಶ್ರೇಯಸ್ ಅಯ್ಯರ್ (ಅಜೇಯ 74) ಹಾಗೂ ರವೀಂದ್ರ ಜಡೇಜಾ (ಅಜೇಯ 45) 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 58 ರನ್ ಸೇರಿಸಿ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಅಮೋಘ ಗೆಲುವು ತಂದಿಟ್ಟರು. ಈ ಮೂಲಕ ಟೀಮ್ ಇಂಡಿಯಾ (Team India) ಮೂರನೇ ಬಾರಿ ಸರಣಿ ವಶಪಡಿಸಿಕೊಂಡ ದಾಖಲೆ ಬರೆಯಿತು. ರೋಹಿತ್ ಶರ್ಮಾ (Rohit Sharma) ಕೂಡ ನಾಯಕನಾಗಿ ವಿಶ್ವ ದಾಖಲೆ ನಿರ್ಮಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್ಮ್ಯಾನ್ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.
“ಈ ಗೆಲುವು ತುಂಬಾನೆ ಮುಖ್ಯವಾಗಿತ್ತು, ಸಂತಸ ತಂದಿದೆ. ಮಧ್ಯಮ ಕ್ರಮಾಂಕ ಬಲಿಷ್ಠವಾಗಿದ್ದು ಜೊತೆಯಾಟ ನೋಡಲು ಖುಷಿ ಆಗುತ್ತದೆ. ಕಳೆದ ಕೆಲವು ಪಂದ್ಯಗಳಿಂದ ಈರೀತಿಯ ಬೆಳವಣಿಗೆ ನಡೆಯುತ್ತಿದೆ,” ಎಂದು ಹೇಳಿದ್ದಾರೆ. ಭಾರತೀಯ ಬೌಲರ್ಗಳು ಈ ಬಾರಿ ಡೆತ್ ಓವರ್ನಲ್ಲಿ ಕೊಂಚ ದುಬಾರಿಯಾದ ಬಗ್ಗೆ ಮಾತನಾಡಿದ ಇವರು, “ಬೌಲರ್ಗಳ ಮೇಲೆ ಬೊಟ್ಟು ಮಾಡಲು ನಾನು ಬಯಸುವುದಿಲ್ಲ ಯಾಕಂದ್ರೆ ಕೆಲವು ಬಾರಿ ಈರೀತಿ ನಡೆಯುತ್ತದೆ. ಬ್ಯಾಟಿಂಗ್ ಪವರ್ ಪ್ಲೇಯಲ್ಲಿ ನಾವು ಉತ್ತಮ ಬೌಲಿಂಗ್ ಮಾಡಿದೆವು. ಕೊನೆಯ ಐದು ಓವರ್‌ಗಳಲ್ಲಿ 80 ರನ್ ನೀಡಿದ ಬಗ್ಗೆ ಯೋಚಿಸಬೇಕಿದೆ. ಆದರೆ, ಮೊದಲ 15 ಓವರ್‌ಗಳಲ್ಲಿ ನಮ್ಮ ಬೌಲರ್ಗಳ ಪ್ರದರ್ಶನ ಚೆನ್ನಾಗಿತ್ತು. ಪಿಚ್ ಅತ್ಯುತ್ತಮವಾಗಿದ್ದು ಚೆಂಡು ಬ್ಯಾಟ್ಗೆ ನಾಜೂಕಾಗಿ ಬರುವ ಕಾರಣ ಈರೀತಿ ಆಗುತ್ತದೆ,” ಎಂದು ಹೇಳಿದ್ದಾರೆ.
ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡಿರುವ ರೋಹಿತ್, “ನಮ್ಮ ಬ್ಯಾಟಿಂಗ್ ಯುನಿಟ್ನಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಅವರಿಗೆ ಅವಕಾಶವನ್ನು ನೀಡುತ್ತಾ ಇದ್ದೇವೆ. ಸಂಜು ಸ್ಯಾಮ್ಸನ್ ಅವಕಾಶ ಸಿಕ್ಕಾಗ ತಮ್ಮ ಸಾಮರ್ಥ್ಯವನ್ನು ಸಾಭೀತು ಪಡಿಸಿದ್ದಾರೆ. ಇನ್ನಷ್ಟು ಪ್ರತಿಭೆಗಳು ತಂಡದಲ್ಲಿದ್ದಾರೆ, ಅವರಿಗೆ ಸಾಭೀತು ಮಾಡಲು ಅವಕಾಶ ಬೇಕಷ್ಟೆ. ಇನ್ನೂ ಅನೇಕ ಆಟಗಾರರು ಸಾಲಿನಲ್ಲಿದ್ದಾರೆ, ಅವರಿಗೂ ಅವಕಾಶ ಒದಗಿಬರುತ್ತದೆ. ಸಮಯಕ್ಕಾಗಿ ಕಾಯಬೇಕಷ್ಟೆ. ಪ್ರತಿ ಆಟಗಾರನ ಸಾಮರ್ಥ್ಯ ನಮಗೆ ತಿಳಿದಿದೆ. ಶ್ರೇಯಸ್ ಅಯ್ಯರ್ ಅರ್ಧಶತಕ ಬಹಳ ಮುಖ್ಯ ಪಾತ್ರವಹಿಸಿತು. ಅವರಿಂದ ನಾವು ಬೇರೆ ಏನನ್ನು ನಿರೀಕ್ಷಿಸುವುದಿಲ್ಲ. ಜಡೇಜಾ ಕೂಡ ಬ್ಯಾಟಿಂಗ್ನಲ್ಲಿ ಅದ್ಭುತ ಆಟ ಆಡಿದರು,” ಎಂದು ನುಡಿದರು.
ಮೂರನೇ ಟಿ20ಗೆ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್, “ತಂಡದಲ್ಲಿ ಏನು ಬದಲಾವಣೆ ಮಾಡಬೇಕು ಎಂಬ ಬಗ್ಗೆ ಯೋಚಿಸುತ್ತೇವೆ. ನಮ್ಮಲ್ಲಿ 27 ಆಟಗಾರರಿದ್ದಾರೆ. ನಾವು ಸರಣಿ ಗೆದ್ದಾಗ ಬೆಂಚ್ ಕಾದಿದ್ದ ಆಟಗಾರರಿಗೆ ಅವಕಾಶ ನೀಡಬೇಕು. ಕೆಲ ಆಟಗಾರರು ಟೆಸ್ಟ್ನಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ ಎಲ್ಲರ ಬಗ್ಗೆಯೂ ಗಮನ ಹರಿಸಬೇಕಿದೆ. ಕೇವಲ ಫಿಸಿಕಲಿಯಾಗಿ ಮಾತ್ರವಲ್ಲದೆ ಮೆಂಟಲಿಯಾಗಿಯೂ ಗಮನ ಹರಿಸಬೇಕಿದೆ. ಅಂತಿಮವಾಗಿ ನಾವು ಗೆಲುವು ಸಾಧಿಸಬೇಕು, ಪಾಸಿಟಿವ್ ಮೈಂಡ್ನೊಂದಿಗೆ ಮುಂದಿನ ಕದನಕ್ಕೆ ಇಳಿಯಬೇಕು,” ಎಂದು ಹೇಳಿದ್ದಾರೆ.
ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಶ್ರೇಯಸ್ ಅಯ್ಯರ್ ಮಾತನಾಡಿದ್ದು, “ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಆದರೆ, ಅವರು ಔಟಾದ ನಂತರ ಸಂಜು ಸ್ಯಾಮ್ಸನ್ ಜೊತೆಗಾರನಾಗಿ ಉತ್ತಮ ಆಟವಾಡಿದರು. ಸಂಜು ಔಟಾದಾಗ ಜಡೇಜಾ ಕ್ರೀಸ್ಗೆ ಬಂದು ಪಂದ್ಯದ ಗೆಲುವನ್ನು ಹತ್ತಿರ ಮಾಡಿದರು. ನಾನು ಬ್ಯಾಟ್ ಮಾಡಲು ಬಂದು ಕೆಲ ಎಸೆತಗಳನ್ನು ಎದುರಿಸಿದಾಗ ಚೆಂಡು ಟರ್ನ್ ಆಗುವುದಿಲ್ಲ ಎಂಬುದು ತಿಳಿಯಿತು. ಹೀಗಾಗಿ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದೆ,” ಎಂದು ಹೇಳಿದರು.
IND vs SL 2nd T20: ಭಾರತಕ್ಕೆ ದಾಖಲೆಯ 100ನೇ ಜಯ ತಂದಿಟ್ಟು ತಾನೂ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ
Published On - 9:03 am, Sun, 27 February 22