T20 World Cup 2024: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಟಿ20 ವಿಶ್ವಕಪ್ ಫೈನಲ್ಗೆ ಲಗ್ಗೆಯಿಟ್ಟಿದೆ. ಗಯಾನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್ಗಳಿಂದ ಸೋಲಿಸಿ ಟೀಮ್ ಇಂಡಿಯಾ 10 ವರ್ಷಗಳ ಬಳಿಕ ಮತ್ತೆ ಫೈನಲ್ಗೇರಿದೆ. ದಶಕದ ಬಳಿಕ ಭಾರತ ತಂಡ ಫೈನಲ್ಗೆ ಪ್ರವೇಶಿಸುತ್ತಿದ್ದಂತೆ ಅತ್ತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾವುಕಾರದರು.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 39 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 57 ರನ್ ಬಾರಿಸಿದರು. ಇನ್ನು ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಸಿಡಿಸಿದರು. ಹಾಗೆಯೇ ಹಾರ್ದಿಕ್ ಪಾಂಡ್ಯ 23 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
172 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಭಾರತೀಯರ ಸ್ಪಿನ್ ದಾಳಿಗೆ ಕಂಗಾಲಾದರು. ಒಂದೆಡೆ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿದರೆ, ಮತ್ತೊಂದೆಡೆ ಕುಲ್ದೀಪ್ ಯಾದವ್ 3 ವಿಕೆಟ್ ಉರುಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು 16.4 ಓವರ್ಗಳಲ್ಲಿ 103 ರನ್ಗಳಿಸಿ ಆಲೌಟ್ ಆಯಿತು.
68 ರನ್ಗಳ ಭರ್ಜರಿ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದ ಟೀಮ್ ಇಂಡಿಯಾ ಆಟಗಾರರು ಖುಷಿ ಖುಷಿಯಾಗಿ ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ್ದರು. ಆದರೆ ಅದಾಗಲೇ ಪೆವಿಲಿಯನ್ಗೆ ತೆರಳಿದ್ದ ರೋಹಿತ್ ಶರ್ಮಾ ಭಾವುಕರಾಗಿ ಅಲ್ಲೇ ಡ್ರೆಸ್ಸಿಂಗ್ ರೂಮ್ ಗ್ಯಾಲರಿಯಲ್ಲಿ ಕೂತಿದ್ದರು.
ಅಲ್ಲದೆ ಟೀಮ್ ಇಂಡಿಯಾ ಆಟಗಾರರು ಗೆದ್ದ ಖುಷಿಯಲ್ಲಿ ಆಗಮಿಸುತ್ತಿದ್ದಂತೆ ಅತ್ತ ರೋಹಿತ್ ಶರ್ಮಾ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡು ಬಂತು. ಇದೀಗ ಟೀಮ್ ಇಂಡಿಯಾ ನಾಯಕ ಕಣ್ಣೀರು ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Rohit Sharma crying 😭😭😭??? pic.twitter.com/bbtRGTwNcK
— Jon | Michael | Tyrion (@tyrion_jon) June 27, 2024
ಮೊದಲ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಗೆದ್ದಿರುವ ಸೌತ್ ಆಫ್ರಿಕಾ ಮತ್ತು ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿರುವ ಭಾರತ ತಂಡಗಳು ಜೂನ್ 29 ರಂದು ಫೈನಲ್ ಪಂದ್ಯವಾಡಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.