Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ

| Updated By: Vinay Bhat

Updated on: Nov 18, 2021 | 8:41 AM

India vs New Zealand: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ, ಬ್ಯಾಟಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ
Rohit Sharma India vs New Zealand
Follow us on

ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದ ಕೆಲವೇ ದಿನಗಳ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬುಧವಾರ ಮೊದಲ ಪಂದ್ಯವನ್ನಾಡಿದ ಭಾರತ (India vs New Zealand) 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗೆಲ್ಲಲು 165 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ (Team India) ಎದುರಾಳಿ ತಂಡದ ಶಿಸ್ತಿನ ಬೌಲಿಂಗ್‌ ಎದುರು ಒತ್ತಡಕ್ಕೆ ಸಿಲುಕಿದರೂ ಅಂತಿಮವಾಗಿ 19.4 ಓವರ್‌ಗಳಲ್ಲಿ ಗುರಿ ಮುಟ್ಟಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ಕ್ಯಾಪ್ಟನ್‌ ರೋಹಿತ್‌ ಶರ್ಮಾ (Rohit Sharma), ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ರಿಷಭ್ ಪಂತ್‌ (Rishabh Pant) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಟೀಮ್‌ ಇಂಡಿಯಾ ಗೆಲುವಿನ ರೂವಾರಿಗಳಾದರು. ಈ ಮೂಲಕ ದಿಗ್ಗಜ ರಾಹುಲ್ ದ್ರಾವಿಡ್ (Rahul Dravid) ಹಾಗೂ ರೋಹಿತ್ ಶರ್ಮಾ ಅವರ ನೂತನ ಕೋಚ್-ನಾಯಕ ಜೋಡಿಯೂ ಗೆಲುವಿನ ಮೋಡಿ ಮಾಡಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್​ಮ್ಯಾನ್ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ, ಬ್ಯಾಟಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. “ನಾವು ಕಂಡಂತೆ ಈ ಪಂದ್ಯ ಸುಲಭದ್ದಾಗಿರಲಿಲ್ಲ. ಇದು ನಮ್ಮ ಆಟಗಾರರಿಗೆ ಒಂದು ಉತ್ತಮ ಕಲಿಕೆಯಾಗಿದೆ. ಯಾಕಂದ್ರೆ ಇದಕ್ಕೂ ಮುನ್ನ ಭಾರತ ಪರ ಇವರು ಈರೀತಿಯ ಸಂದರ್ಭದಲ್ಲಿ ಬ್ಯಾಟ್ ಬೀಸಿರಲಿಲ್ಲ. ಕಠಿಣ ಸಮಯದಲ್ಲಿ ಯಾವರೀತಿ ಬ್ಯಾಟ್ ಮಾಡಬೇಕು ಎಂಬುದು ಕಲಿಯಲು ಈ ಪಂದ್ಯ ನಮ್ಮ ಆಟಗಾರರಿಗೆ ನೆರವಾಯಿತು. ಎಲ್ಲ ಸಮಯದಲ್ಲಿ ಬಿರುಸಿನ ಆಟವಾಡುವುದು ಅಲ್ಲ, ಬದಲಾಗಿ ಮೈದಾನದ ಮೂಲೆಮೂಲೆಯಲ್ಲಿ ರನ್ ಕಲೆಹಾಕುವುದು ಒಂದು, ಎರಡು ರನ್, ಬೌಂಡರಿ ಬಾರಿಸುವ ಕಲೆ ಇರಬೇಕು. ತಂಡದ ಆಟಗಾರರ ಪ್ರದರ್ಶನ ಖುಷಿ ನೀಡಿದೆ. ಬ್ಯಾಟರ್​ಗಳು ಪಂದ್ಯವನ್ನು ಫಿನಿಶ್ ಮಾಡಿದ್ದು ಉತ್ತಮವಾಗಿತ್ತು” ಎಂದು ರೋಹಿತ್ ಹೇಳಿದ್ದಾರೆ.

“ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಕೆಲ ಆಟಗಾರರ ಅನುಪಸ್ಥಿತಿಯಲ್ಲಿ ಹೊಸ ಆಟಗಾರರಿಗೆ ತಮ್ಮ ಕೌಶಲ್ಯ ತೋರಲು ಇದೊಂದು ವೇದಿಕೆಯಾಯಿತು. ಕೊನೆಯ 3-4 ಓವರ್​ಗಳಲ್ಲಿ ಅದ್ಭುತ ಆಟವಾಡಿದರು. ಅಶ್ವಿನ್ ಮತ್ತು ಅಕ್ಷರ್ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ಮಾಡಿದ್ದಾರೆ. ಇವರು ಪ್ರತಿಬಾರಿ ವಿಕೆಟ್​ಗಾಗಿ ಹೊಂಚು ಹಾಕುತ್ತಿರುತ್ತಾರೆ. ಇದು ಒಳ್ಳೆಯ ಗ್ಲೇಮ್ ಪ್ಲಾನ್. ಎದುರಾಳಿಗೆ ಪ್ರೆಶರ್ ನೀಡಲು ಇದು ಸಹಕಾರಿಯಾಗುತ್ತದೆ. ಸೂರ್ಯಕುಮಾರ್ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಅವರ ಆಟದ ಶೈಲಿಯೇ ಹಾಗೆ, ಸ್ಪಿನ್ನರ್​ಗೆ ಅವರು ಚೆನ್ನಾಗಿ ಆಡುತ್ತಾರೆ.”

“ಟ್ರೆಂಟ್ ಬೌಲ್ಟ್ ಮತ್ತು ನಾನು ಜೊತೆಯಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನನ್ನ ಮೈನಸ್ ಪಾಯಿಂಟ್ ಏನು ಎಂಬುದು ಅವರಿಗೆ ಗೊತ್ತು. ಅವರ ಸ್ಟ್ರೆಂತ್ ಏನು ಎಂಬುದು ನನಗೆ ಗೊತ್ತು. ಇದು ನಮ್ಮಿಬ್ಬರಲ್ಲಿ ಉತ್ತಮ ಪೈಟ್ ನೀಡಿತು. ನಾನು ಈ ಹಿಂದೆ ಅವರಿಗೆ ನಾಯಕನಾಗಿ ಹೇಗೆ ಬೌಲಿಂಗ್ ಮಾಡಿದೆಂದು ಹೇಳಿದ್ದೆನೋ ಅದೇರೀತಿ ಬೌಲಿಂಗ್ ಮಾಡಿದ್ದಾರೆ. ಮಿಡ್ ವಿಕೆಟ್ ಬ್ಯಾಕ್, ಬೌನ್ಸರ್ ಇದನ್ನೆ ಟಾರ್ಗೆಟ್ ಮಾಡಿದರು” ಎಂದು ರೋಹಿತ್ ಹೇಳಿದ್ದಾರೆ.

India vs New Zealand: ಜೈಪುರದಲ್ಲಿ ಬೆಳಗಿದ ಸೂರ್ಯ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆದ್ದು ಬೀಗಿದ ಭಾರತ

(Rohit Sharma first words after India vs New Zealand Match as the full-time skipper)