Smriti Mandhana: ಮಹಿಳಾ ಬಿಗ್ ಬ್ಯಾಷ್ನಲ್ಲಿ ಸ್ಮೃತಿ ಮಂದಾನ ಆರ್ಭಟ: ದಾಖಲೆಯ ಸ್ಫೋಟಕ ಶತಕ: ವಿಡಿಯೋ
Women's Big Bash League: ಭಾರತದ ಮಹಿಳಾ ತಂಡದ ಬ್ಯಾಟರ್ ಸ್ಮೃತಿ ಮಂದಾನ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಜೊತೆಗೆ ಮಹಿಳಾ ಬಿಗ್ಬ್ಯಾಶ್ ಇತಿಹಾಸದಲ್ಲಿ ಗರಿಷ್ಠ (114) ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ (Australia) ಸಾಗುತ್ತಿರುವ ಮಹಿಳೆಯರ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ (Womens Big Bash League) ಭಾರತ ಮಹಿಳಾ ತಂಡದ ಬ್ಯಾಟರ್ ಸ್ಮೃತಿ ಮಂದಾನ (Smriti Mandhana) ಹೊಸ ದಾಖಲೆ ಬರೆದಿದ್ದಾರೆ. ಬಿಬಿಎಲ್ನಲ್ಲಿ ಸಿಡ್ನಿ ಥಂಡರ್ಸ್ (Sydney Thunder) ತಂಡದ ಪರವಾಗಿ ಆಡುತ್ತಿರುವ ಮಂದಾನ ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬಿಗ್ ಬ್ಯಾಷ್ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಆದರೆ, ಇವರ ಸ್ಫೋಟಕ ಶತಕದ ಹೊರತಾಗಿಯು ಸಿಡ್ನಿ ಥಂಡರ್ಸ್ ತಂಡ ಮೆಲ್ಬೋರ್ನ್ ವಿರುದ್ಧ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು.
ಹೌದು, ಬುಧವಾರ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಕ್ಕಿತು. ಒಂದುಕಡೆ ಭಾರತ-ನ್ಯೂಜಿಲೆಂಡ್ ಪಂದ್ಯವಿದ್ದರೆ, ಇತ್ತ ಬಿಗ್ ಬ್ಯಾಷ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ ಎದುರಾಳಿಗಳಾಗಿದ್ದವು. ಮೆಲ್ಬೋರ್ನ್ ರೆನೆಗೇಡ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 175 ರನ್ಗಳಿಸಿತ್ತು. ಕೇವಲ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಭಾರತದ ಹರ್ಮನ್ ಪ್ರೀತ್ ಕೌರ್ 3ನೇ ಓವರ್ನಿಂದ 20ನೇ ಓವರ್ ತನಕ ಬ್ಯಾಟಿಂಗ್ ಮಾಡಿದರು.
ಕೌರ್ 55 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 81 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಕೌರ್ಗೆ ಸಾಥ್ ನೀಡಿದ ಜೆಸ್ ಡಫ್ಫಿನ್ 22 ಎಸೆತಗಳಲ್ಲಿ 33 ರನ್ಗಳಿಸಿದರು. ಪರಿಣಾಮ ಮೆಲ್ಬೋರ್ನ್ ರೆನೆಗೇಡ್ಸ್ 4 ವಿಕೆಟ್‌ಗೆ 175 ರನ್ ಪೇರಿಸಿತು.
175 ರನ್ಗಳ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ಗಳಿಸಿ ವಿರೋಚಿತ ಸೋಲು ಕಂಡಿತು. ಸ್ಮೃತಿ ಮಂದಾನ 64 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 114 ರನ್ಗಳಿಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಮಂದಾ ಜೊತೆ 14 ಓವರ್ಗಳ ಜೊತೆಯಾಟ ಮಾಡಿದ ವಿಕೆಟ್ ಕೀಪರ್ ತಹಿಲಾ ವಿಲ್ಸನ್ 39 ಎಸೆತಗಳಲ್ಲಿ 38 ರನ್ಗಳಿಸಿ ಸೋಲಿಗೆ ಪರೋಕ್ಷ ಕಾರಣರಾದರು.
ಕೊನೇ ಓವರ್‌ನಲ್ಲಿ 13 ರನ್ ಬೇಕಿದ್ದಾಗ ಹರ್ಮಾನ್‌ಪ್ರೀತ್ (27ಕ್ಕೆ 1) 8 ರನ್ ಮಾತ್ರ ಬಿಟ್ಟುಕೊಟ್ಟರು. ಕೊನೇ ಎಸೆತದಲ್ಲಿ 6 ರನ್ ಬೇಕಿದ್ದಾಗ ಸ್ಮತಿ 1 ರನ್ ಕಸಿಯಲಷ್ಟೇ ಯಶಸ್ವಿಯಾದರು. ಈ ಜಯದೊಂದಿಗೆ ರೆನೆಗೇಡ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಪ್ರಶಸ್ತಿ ಸುತ್ತಿಗೆ ನೇರಅರ್ಹತೆ ಸಂಪಾದಿಸುವ ಅವಕಾಶ ವೃದ್ಧಿಸಿಕೊಂಡಿದೆ.
ಟೂರ್ನಿಯಲ್ಲಿ ಕೌರ್ 10 ಪಂದ್ಯಗಳನ್ನಾಡಿದ್ದು, 78ರ ಸರಾಸರಿಯಲ್ಲಿ 390 ರನ್ ಮತ್ತು 13 ವಿಕೆಟ್ ಪಡೆದು ತಂಡ ಅಗ್ರಸ್ಥಾನದಲ್ಲಿರಲು ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಮಂಧಾನ 11 ಪಂದ್ಯಗಳಲ್ಲಿ 348 ರನ್ಗಳಿಸಿಯೂ ತಂಡದ ಇತರೆ ಬ್ಯಾಟರ್ಗಳ ಸಾಥ್ ನೀಡದ ಕಾರಣ ಸಿಡ್ನಿ ಥಂಡರ್ 7ನೇ ಸ್ಥಾನದಲ್ಲಿರುವಂತೆ ಮಾಡಿದೆ. ಈ ಸೋಲಿನೊಂದಿಗೆ ಟೂರ್ನಿಯಿಂದಲೂ ಹೊರ ಬಿದ್ದಂತಾಗಿದೆ. ಮಹಿಳಾ ಬಿಗ್ಬ್ಯಾಶ್ ಇತಿಹಾಸದಲ್ಲಿ ಗರಿಷ್ಠ (114) ರನ್ ದಾಖಲಿಸಿದ ಸ್ಮೃತಿ ಮಂಧಾನ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.
India vs New Zealand: ಭಾರತ- ನ್ಯೂಜಿಲೆಂಡ್ ಪಂದ್ಯದ ನಡುವೆ ಮೊಹಮ್ಮದ್ ಸಿರಾಜ್ಗೆ ಹೊಡೆದ ರೋಹಿತ್ ಶರ್ಮಾ
Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ
(Smriti Mandhana became the first Indian player to score a century in the Womens Big Bash League)