ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಗೆ ಚಾಲನೆ ದೊರಕಿದೆ. ಇಂದು ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ತಂಡ ಸೆಣೆಸಾಟ ನಡೆಸುತ್ತಿದೆ. ಭಾರತ ತಂಡ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ರೋಹಿತ್ (Rohit Sharma) ಪಡೆ ಎರಡು ತಂಡಗಳ ವಿರುದ್ಧ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ. ಅ. 17 ರಂದು ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಕೊನೆಯ ವಾರ್ಮ್-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧವಿದೆ. ಇದಕ್ಕಾಗಿ ಈಗಾಗಲೇ ಗಬ್ಬಾಕ್ಕೆ ತಲುಪಿರುವ ರೋಹಿತ್ ಪಡೆ ಪ್ರ್ಯಾಕ್ಟೀಸ್ ಸೆಷನ್ ಶುರು ಮಾಡಿದೆ. ಇದರಲ್ಲಿ ಎಲ್ಲರ ಕಣ್ಣು ಮೊಹಮ್ಮದ್ ಶಮಿ (Mohammed Shami) ಅವರ ಮೇಲಿದೆ.
ಟಿ20 ವಿಶ್ವಕಪ್‌ಗೆ ಮುಖ್ಯ ಆಟಗಾರನಾಗಿ ಆಯ್ಕೆಯಾಗದ ಮೊಹಮ್ಮದ್ ಶಮಿ ಇದೀಗ ಜಸ್ಪ್ರೀತ್ ಬುಮ್ರಾ ಅಲಭ್ಯತೆಯಲ್ಲಿ ತಂಡ ಸೇರಿಕೊಂಡಿದ್ದಾರೆ. ಬುಮ್ರಾ ನೀಡುತ್ತಿದ್ದ ಕೊಡುಗೆಯನ್ನು ಶಮಿ ಎಷ್ಟರ ಮಟ್ಟಿಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೆ ಅಭ್ಯಾಸ ಆರಂಭಿಸಿದ್ದ ಶಮಿ ಮೇಲೆ ಭಾರತ ನಂಬಿಕೆಯಿಟ್ಟಿದ್ದು ಎಲ್ಲರ ಕಣ್ಣು ಇವರ ಮೇಲಿದೆ. ”ಮೊಹಮ್ಮದ್ ಶಮಿ ಅವರನ್ನು ನಾನು ಕಂಡಿಲ್ಲ. ಆದರೆ, ಅವರು ಒಳ್ಳೆಯ ಫಾರ್ಮ್ನಲ್ಲಿ ಇದ್ದಾರೆಂದು ಕೇಳಿದ್ದೇನೆ. ಬ್ರಿಸ್ಬೇನ್ನಲ್ಲಿ ಅಭ್ಯಾಸ ಸೆಷನ್ ಇದೆ. ಇಲ್ಲಿ ಶಮಿಯನ್ನು ಬೇಟಿ ಆಗುತ್ತೇನೆ,” ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ 36 ರನ್ಗಳಿಂದ ಸೋಲುಂಡಿತು. ಇದೀಗ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಧಿಕೃತ ಅಭ್ಯಾಸ ಪಂದ್ಯಕ್ಕಾಗಿ ಬ್ರಿಸ್ಬೇನ್ಗೆ ತಲುಪಿದ್ದಾರೆ.
ಅಕ್ಟೋಬರ್ 17 ರಂದು ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:30 ಕ್ಕೆ ಶುರುವಾಗಲಿದೆ. ಕೊನೆಯ ವಾರ್ಮ್-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದು ಮಧ್ಯಾಹ್ನ 1:30 ಕ್ಕೆ ಶುರುವಾಗಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್ ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ರವಿ ಬಿಷ್ಟೋಯಿ.
Published On - 10:02 am, Sun, 16 October 22