Ind vs WI: ಇಂದು ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ: ರೋಹಿತ್-ಕೊಹ್ಲಿ ಮೇಲೆ ಎಲ್ಲರ ಕಣ್ಣು

India vs West Indies, 1st ODI: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ಮೊದಲ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ದೀಪಕ್ ಹೂಡ ಪದಾರ್ಪಣೆ ಮಾಡ್ತಾರ ಎಂಬ ಕುತೂಹಲ ಕೂಡ ಮೂಡಿದೆ.

Ind vs WI: ಇಂದು ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ: ರೋಹಿತ್-ಕೊಹ್ಲಿ ಮೇಲೆ ಎಲ್ಲರ ಕಣ್ಣು
Ind vs WI
Edited By:

Updated on: Feb 06, 2022 | 8:35 AM

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾಗಿ ಇದೇ ಮೊದಲ ಬಾರಿಗೆ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಯಾವುದೇ ಅಧಿಕಾರ ವಿಲ್ಲದೆ ಸಂಪೂರ್ಣ ಬ್ಯಾಟಿಂಗ್ ಕಡೆ ಗಮನ ಹರಿಸುತ್ತಿದ್ದು ಯಾವರೀತಿ ಪ್ರದರ್ಶನ ಮೂಡಿಬರಲಿದೆ ಎಂಬುದು ಕುತೂಹಲ. ಹಾಗೆಯೇ ಭಾರತಕ್ಕೆ ಇದು 1000ನೇ ಏಕದಿನ ಪಂದ್ಯವಾಗಿರುವುದು ವಿಶೇಷ. ಟೀಮ್‌ ಇಂಡಿಯಾಗೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಹಾಗೂ ಆಲ್‌ರೌಂಡರ್‌ ಶಾರುಖ್‌ ಖಾನ್‌ ಅವರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಆಲ್‌ ಇಂಡಿಯಾ ಸೀನಿಯರ್ಸ್‌ ಕಮಿಟಿ ತಿಳಿಸಿದೆ. ಕೆಎಲ್ ರಾಹುಲ್ ಈ ಪಂದ್ಯಕ್ಕೆ ಲಭ್ಯರಿಲ್ಲ. ಇವರ ಜೊತೆಗೆ ಇನ್ನೂ ಕೆಲ ಆಟಗಾರರು ಇಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರಿಗೆ ಕೋವಿಡ್‌-19 ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಕಳೆದ ಬುಧವಾರ ಭಾರತ ಓಡಿಐ ತಂಡಕ್ಕೆ ಮಯಾಂಕ್‌ ಅಗರ್ವಾಲ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. ಬಳಿಕ ಕಿಶನ್ ಮತ್ತು ಶಾರುಖ್ ಖಾನ್​ರನ್ನು ಸೇರಿಸಿಕೊಳ್ಳಲಾಗಿದೆ. ಕೋವಿಡ್ ಪಾಸಿಟಿವ್ ಬಂದ ಮೂವರು ಆಟಗಾರರು ಐಸೊಲೇಷನ್​ನಲ್ಲಿ ಇರುವುದರಿಂದ ಏಕದಿನ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ರೋಹಿತ್‌ ಶರ್ಮ ಗೈರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಗೈದಿದ್ದ ಭಾರತ ವೈಟ್‌ವಾಶ್‌ ಅವಮಾನಕ್ಕೆ ಸಿಲುಕಿದ ಸಂಕಟ ಇನ್ನೂ ದೂರಾಗಿಲ್ಲ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ತಂಡದ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕೆಂಬ ಮೊದಲ ಹಂತದ ಯೋಜನೆ ಕೂಡ ಅಲ್ಲಿ ಸಾಕಾರಗೊಂಡಿರಲಿಲ್ಲ. ಬದಲಿಗೆ, ಸಮಸ್ಯೆಯ ಸರಮಾಲೆ ಇನ್ನಷ್ಟು ಬೆಳೆಯಿತು. ಈ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆಯಾಗಿದೆ. 4ನೇ ಕ್ರಮಾಂಕ ಮತ್ತು ಪಂದ್ಯ ಫಿನಿಶ್ ಮಾಡುವ ಆಟಗಾರನ ಹುಡುಕಾಟಕ್ಕೆ ಇಲ್ಲಾದರು ಉತ್ತರ ಸಿಗುತ್ತಾ ಎಂಬುದು ನೋಡಬೇಕಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ದೀಪಕ್ ಹೂಡ ಪದಾರ್ಪಣೆ ಮಾಡ್ತಾರ ಎಂಬ ಕುತೂಹಲ ಕೂಡ ಮೂಡಿದೆ. ಇತ್ತ ಪ್ರಮುಖ ವೇಗಿಗಳಾದ ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ವಿಶ್ರಾಂತಿಯಲ್ಲಿರುವ ಕಾರಣ ಮೊಹಮ್ಮದ್ ಸಿರಾಜ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಜೋಡಿ ಮತ್ತೆ ಮೋಡಿ ಮಾಡುತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇತ್ತ ವೆಸ್ಟ್ ಇಂಡೀಸ್ ತಂಡ ಕೂಡ ಬಲಿಷ್ಠದಿಂದ ಕೂಡಿದೆ. ಕೀರೊನ್ ಪೊಲಾರ್ಡ್ ಮುನ್ನಡೆಸುತ್ತಿದ್ದು, ಮಾರಕ ವೇಗಿ ಕೇಮರ್ ರೋಚ್ ಕಮ್​ಬ್ಯಾಕ್ ಮಾಡಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಎನ್​​ಕ್ರುಮ್ ಬೊನ್ನೆರ್ ಮತ್ತು ಬ್ರಾಂಡನ್ ಕಿಂಗ್ ತಂಡ ಸೇರಿಕೊಂಡಿದ್ದಾರೆ. ನಿಕೋಲಸ್ ಪೂರನ್, ಡ್ಯಾರೆನ್ ಬ್ರಾವೋ, ಫಾಬಿನ್ ಅಲೆನ್, ಜೇಸನ್ ಹೋಲ್ಡರ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಭಾರತಕ್ಕೆ ಕಠಿಣ ಪೈಪೋಟಿ ನೀಡಲು ಕೆರಿಬಿಯನ್ನರು ಮುಂದಾಗಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್‌ ಪಂತ್(ವಿ.ಕೀ), ದೀಪಕ್‌ ಚಹರ್‌, ಶಾರ್ದುಲ್‌ ಠಾಕೂರ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್ ಯಾದವ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಆವೇಶ್‌ ಖಾನ್‌, ಇಶಾನ್‌ ಕಿಶನ್‌, ಶಾರುಖ್‌ ಖಾನ್‌.

ವೆಸ್ಟ್ ಇಂಡೀಸ್ ತಂಡ: ಕೀರೊನ್ ಪೊಲಾರ್ಡ್ (ನಾಯಕ), ಕೀಮರ್ ರೋಚ್, ಎನ್​​ಕ್ರುಮ್ ಬೊನ್ನೆರ್, ಬ್ರಾಂಡನ್ ಕಿಂಗ್, ಫಾಬಿನ್ ಅಲೆನ್, ಡ್ಯಾರೆನ್ ಬ್ರಾವೋ, ಶಮರ್ ಬ್ರೋಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೆಲ್ ಹುಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೊ ಶೆಪರ್ಡ್, ಓಡೆನ್ ಸ್ಮಿತ್, ಹೇಡನ್ ವಾಲ್ಶ್.

India vs England U19 World Cup: ದಾಖಲೆಯ 5ನೇ ಬಾರಿ ಅಂಡರ್19 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ: ಇಂಗ್ಲೆಂಡ್ ವಿರುದ್ಧ ಗೆಲುವು