ನಾನು ಔಟಾದರೆ ಅಪ್ಪ-ಅಮ್ಮ ಏನ್ ಮಾಡ್ತಾರೆ ಗೊತ್ತಾ? ರೋಹಿತ್ ಹೇಳಿದ ಮಾತು ವೈರಲ್
ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಜೀವನದ ಮರೆಯಲಾಗದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಟೆಸ್ಟ್ ಪದಾರ್ಪಣೆಯಲ್ಲಿ ಗಳಿಸಿದ 177 ರನ್‌ಗಳು, ಗಾಯದಿಂದಾಗಿ 4 ವರ್ಷ ಕಾಯಬೇಕಾಗಿದ್ದು, ಹಾಗೂ ಹೆತ್ತವರ ಬೆಂಬಲ-ಆತಂಕದ ಬಗ್ಗೆ ಹಂಚಿಕೊಂಡಿದ್ದಾರೆ. ಮೊದಲ ಬಾರಿ ನಾಯಕರಾದಾಗ ತಂದೆ-ತಾಯಿಯನ್ನು ಮೈದಾನಕ್ಕೆ ಕರೆಸಿಕೊಂಡ ವಿಶೇಷ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗನ ಜೀವನದಲ್ಲೂ ಮರೆಯಲಾಗದ ಹಲವು ಕ್ಷಣಗಳಿರುತ್ತವೆ. ಮೈದಾನದಲ್ಲಿ ಸಾಧನೆ ಮಾಡಿದ ಬಳಿಕವೂ ಆ ನೆನಪುಗಳು ಆಟಗಾರರ ಮನಸ್ಸಿನಲ್ಲಿ ಸದಾ ಉಳಿದಿರುತ್ತವೆ. ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಇಂತಹ ಹಲವು ವಿಶೇಷ ನೆನಪುಗಳಿವೆ. ಅದರಲ್ಲೂ ಕ್ರಿಕೆಟ್ ಪಯಣದಲ್ಲಿ ಕುಟುಂಬದ ಬೆಂಬಲ ಹಾಗೂ ಹೆತ್ತವರ ಪ್ರೋತ್ಸಾಹವನ್ನು ಅವರು ಎಂದಿಗೂ ಮರೆಯುವುದಿಲ್ಲ. ‘ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಹಿತ್, ತಮ್ಮ ಟೆಸ್ಟ್ ಕ್ರಿಕೆಟ್ ಪದಾರ್ಪಣೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಮೊದಲ ಪಂದ್ಯವಾಡಲು ನಾಲ್ಕು ವರ್ಷ ಕಾಯಬೇಕಾಗಿದ್ದ ಸಂದರ್ಭ ಹಾಗೂ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಾಗ ತಮ್ಮ ತಂದೆ-ತಾಯಿಯನ್ನು ಮೈದಾನಕ್ಕೆ ಕರೆಸಿಕೊಂಡಿದ್ದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಪಾಲಿನ ಅತಿದೊಡ್ಡ ಸಂಭ್ರಮ
ಕಾರ್ಯಕ್ರಮದಲ್ಲಿ ರೋಹಿತ್ ಅವರಿಗೆ ಮೊದಲ ಟೆಸ್ಟ್ ಕ್ಯಾಪ್ ಪಡೆದಾಗ ಹೇಗೆ ಸಂಭ್ರಮಿಸಿದ್ದೀರಿ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 177 ರನ್ ಗಳಿಸಿದ್ದು ಮತ್ತು ಭಾರತ ತಂಡ ಗೆಲುವು ಸಾಧಿಸಿದ್ದು ತಮ್ಮ ಪಾಲಿನ ಅತಿದೊಡ್ಡ ಸಂಭ್ರಮ ಎಂದು ಹೇಳಿದ್ದಾರೆ.
‘ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 177 ರನ್ ಗಳಿಸಿದ್ದು ಮತ್ತು ಆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನನಗೆ ಅತ್ಯಂತ ದೊಡ್ಡ ಸಂತೋಷದ ವಿಚಾರವಾಗಿತ್ತು. ಟೆಸ್ಟ್ ಆಟಗಾರನಾಗಿ ನನ್ನ ಮೊದಲ ಪಂದ್ಯವಾಗಿದ್ದರಿಂದ ತಂಡವನ್ನು ಗೆಲ್ಲಿಸುವುದೇ ನನ್ನ ಮೊದಲ ಗುರಿಯಾಗಿತ್ತು. ಅಂತಿಮವಾಗಿ ನಾವು ಪಂದ್ಯ ಗೆದ್ದೆವು. ಅದರ ಜೊತೆಗೆ ನನ್ನ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು’ ಎಂದು ರೋಹಿತ್ ಹೇಳಿದ್ದಾರೆ.
ಗಾಯದಿಂದಾಗಿ 4 ವರ್ಷ ಕಾಯಬೇಕಾಯಿತು
2010ರಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ರೋಹಿತ್‌ಗೆ ಸಿಕ್ಕಿತ್ತು. ಆದರೆ, ಪಂದ್ಯಕ್ಕೂ ಮುನ್ನ ಪಾದದ ಗಾಯಕ್ಕೆ ತುತ್ತಾದ ಕಾರಣ ಆ ಅವಕಾಶ ಕೈತಪ್ಪಿತ್ತು. ಇದರಿಂದಾಗಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವಾಡಲು ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು. ಈ ಬಗ್ಗೆ ಮಾತನಾಡಿದ ರೋಹಿತ್, ‘2010ರಲ್ಲಿ ನಾನು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಿತ್ತು. ಆದರೆ, ಪಂದ್ಯಕ್ಕೂ ಮುನ್ನ ನನ್ನ ಪಾದಕ್ಕೆ ಗಾಯವಾಗಿದ್ದರಿಂದ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಮತ್ತೊಂದು ನಾಲ್ಕು ವರ್ಷ ಕಾಯಬೇಕಾಯಿತು. ಆ ದೀರ್ಘ ಕಾಯುವಿಕೆಯೇ ನನ್ನ ಚೊಚ್ಚಲ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಿತು. ನನ್ನ ಮೊದಲ ಟೆಸ್ಟ್ ಪಂದ್ಯ ಇಷ್ಟೊಂದು ಅದ್ಭುತವಾಗಿರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅದೇ ನನಗೆ ದೊಡ್ಡ ಸಂಭ್ರಮವಾಗಿತ್ತು’ ಎಂದು ನೆನಪಿಸಿಕೊಂಡಿದ್ದಾರೆ.
ತಮ್ಮ ಟೆಸ್ಟ್ ಪದಾರ್ಪಣೆಯ ಪಂದ್ಯ ನಡೆದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದ ಬಗ್ಗೆಯೂ ರೋಹಿತ್ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವನದ ಹಲವು ಮಹತ್ವದ ಕ್ಷಣಗಳು ಇದೇ ಮೈದಾನದಲ್ಲಿ ನಡೆದಿವೆ ಎಂದು ಹೇಳಿದ್ದಾರೆ.
ನಾಯಕನಾದಾಗ ಹೆತ್ತವರಿಗೆ ವಿಶೇಷ ಮನವಿ
ಕಾರ್ಯಕ್ರಮದಲ್ಲಿ ರೋಹಿತ್ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ವಿಶೇಷ ನೆನಪನ್ನೂ ಹಂಚಿಕೊಂಡಿದ್ದಾರೆ. ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2017ರಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಾಗ ಇಬ್ಬರನ್ನೂ ಮೈದಾನಕ್ಕೆ ಬರುವಂತೆ ಮನವೊಲಿಸಿದ್ದಾಗಿ ತಿಳಿಸಿದ್ದಾರೆ. ‘2017ರಲ್ಲಿ ನಾನು ಮೊದಲ ಬಾರಿಗೆ ಭಾರತ ತಂಡದ ನಾಯಕನಾದಾಗ ನನ್ನ ತಂದೆ ಮತ್ತು ತಾಯಿಯನ್ನು ಪಂದ್ಯ ವೀಕ್ಷಿಸಲು ಬರುವಂತೆ ಕೇಳಿಕೊಂಡಿದ್ದೆ. ಆ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿತ್ತು’ ಎಂದು ರೋಹಿತ್ ಹೇಳಿದ್ದಾರೆ.
ತಮ್ಮ ತಂದೆ-ತಾಯಿಗೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುವುದಕ್ಕಿಂತ ಮನೆಯಲ್ಲೇ ಕುಳಿತು ನೋಡುವುದು ಹೆಚ್ಚು ಇಷ್ಟವಂತೆ. ಮಗ ಬ್ಯಾಟಿಂಗ್ ಮಾಡುವಾಗ ಔಟಾದರೆ ಅಥವಾ ಒತ್ತಡದ ಪರಿಸ್ಥಿತಿ ಎದುರಾದರೆ ಅವರಿಗೆ ಆತಂಕವಾಗುತ್ತದೆ. ಹೀಗಾಗಿ ಮನೆಯಲ್ಲೇ ಪಂದ್ಯ ವೀಕ್ಷಿಸಲು ಬಯಸುತ್ತಾರೆ ಎಂದು ರೋಹಿತ್ ತಮಾಷೆಯಾಗಿ ಹೇಳಿದ್ದಾರೆ. ‘ನನ್ನ ತಂದೆ-ತಾಯಿಗೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ನೋಡುವುದು ಅಷ್ಟಾಗಿ ಇಷ್ಟವಿಲ್ಲ. ನಾನು ಆಡುವುದನ್ನು ನೋಡಿದಾಗ ಅವರಿಗೆ ತುಂಬಾ ಆತಂಕವಾಗುತ್ತದೆ. ಮನೆಯಲ್ಲೇ ಆರಾಮವಾಗಿ ಕುಳಿತು ಪಂದ್ಯ ನೋಡಲು ಬಯಸುತ್ತಾರೆ. ಒಂದು ವೇಳೆ ನಾನು ಔಟಾದರೂ ಮನೆಯಲ್ಲಿ ಸುಮ್ಮನೆ ಮಲಗಬಹುದು, ಹೆಚ್ಚು ಚಿಂತಿಸುವ ಅಗತ್ಯವಿರುವುದಿಲ್ಲ ಎಂಬುದು ಅವರ ಭಾವನೆ’ ಎಂದು ರೋಹಿತ್ ಹೇಳಿದ್ದಾರೆ.
2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ
ತಂದೆ-ತಾಯಿಗೆ ಮನವಿ ಮಾಡಿದ್ದೆ
ಮೈದಾನದಲ್ಲಿ ಪಂದ್ಯ ವೀಕ್ಷಿಸುವಾಗ ಹೆತ್ತವರಿಗೆ ಎದುರಾಗುವ ಒತ್ತಡದ ಬಗ್ಗೆಯೂ ಮಾತನಾಡಿದ ಅವರು, ಆಟಗಾರರಿಗೇ ಪಂದ್ಯ ಆಡುವಾಗ ಸಾಕಷ್ಟು ಒತ್ತಡವಿರುತ್ತದೆ. ಇನ್ನು ನಮ್ಮ ತಂದೆ-ತಾಯಿ ನಮ್ಮ ಆಟವನ್ನು ನೋಡುತ್ತಿರುವಾಗ ಅವರ ಮನಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದು ಎಂದಿದ್ದಾರೆ.
‘ನಾವು ಮೈದಾನದಲ್ಲಿ ಇಷ್ಟೊಂದು ಒತ್ತಡ ಅನುಭವಿಸುವಾಗ, ನಮ್ಮ ತಂದೆ-ತಾಯಿ ಪಂದ್ಯ ನೋಡುವಾಗ ಎಷ್ಟು ಆತಂಕ ಪಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಾಗಿ 2017ರಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಾಗ ಆ ವಿಶೇಷ ಪಂದ್ಯವನ್ನು ತಪ್ಪಿಸಿಕೊಳ್ಳಬಾರದು ಎಂದು ತಂದೆ-ತಾಯಿಗೆ ಮನವಿ ಮಾಡಿದ್ದೆ. ಇಬ್ಬರೂ ಬಂದು ಪಂದ್ಯ ವೀಕ್ಷಿಸಲೇಬೇಕು ಎಂದು ಒತ್ತಾಯಿಸಿದ್ದೆ’ ಎಂದು ರೋಹಿತ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
