ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ನಲ್ಲಿರುವುದು ಗೊತ್ತೇ ಇದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5 ಇನಿಂಗ್ಸ್ ಆಡಿದ್ದ ಹಿಟ್ಮ್ಯಾನ್ ಕೇವಲ 31 ರನ್ ಮಾತ್ರ ಕಲೆಹಾಕಿದ್ದರು. ಇದೀಗ ಕಳಪೆ ಫಾರ್ಮ್ನಿಂದ ಹೊರಬರಲು ರೋಹಿತ್ ಶರ್ಮಾ ಮತ್ತೆ ಅಭ್ಯಾಸಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಕೂಡ ಮುಂಬೈ ರಣಜಿ ತಂಡದೊಂದಿಗೆ…!
ಹೌದು, ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಣಜಿ ತಂಡದೊಂದಿಗೆ ಮುಂಬೈನಲ್ಲಿ ಅಭ್ಯಾಸ ನಡೆಸಲು ನಿರ್ಧರಿಸಿದ್ದಾರೆ. ಕೆಲ ಮೂಲಗಳ ಮಾಹಿತಿ ಪ್ರಕಾರ, ಟೀಮ್ ಇಂಡಿಯಾ ನಾಯಕ ಮುಂಬೈನ ಎಂಸಿಎ-ಬಿಕೆಸಿ ಮೈದಾನದಲ್ಲಿ ರಣಜಿ ತಂಡದೊಂದಿಗೆ ಅಭ್ಯಾಸ ನಡೆಸಲು ಮುಂಬೈ ಕ್ರಿಕೆಟ್ ಅಸೋಷಿಯೇಷನ್ನಿಂದ ಅನುಮತಿ ಪಡೆದಿದ್ದಾರೆ.
ಅದರಂತೆ ಜನವರಿ 14 ರಿಂದ ರೋಹಿತ್ ಶರ್ಮಾ ಮುಂಬೈ ತಂಡದೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಲಿದ್ದಾರೆ. ಈಗಾಗಲೇ ವಿಜಯ್ ಹಜಾರೆ ಟ್ರೋಫಿಯಿಂದ ಹೊರಬಿದ್ದಿರುವ ಮುಂಬೈ ತಂಡ ಜನವರಿ 23ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಎರಡನೇ ಹಂತಕ್ಕಾಗಿ ಸಿದ್ಧತೆಯನ್ನು ಆರಂಭಿಸಲಿದೆ.
ಇತ್ತ ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಶುರುವಾಗುವುದು ಫೆಬ್ರವರಿ 6 ರಿಂದ. ಅದುವರೆಗೆ ರೋಹಿತ್ ಶರ್ಮಾ ಫ್ರೀ ಇರಲಿದ್ದಾರೆ. ಹೀಗಾಗಿ ಈ ಬಾರಿ ಹಿಟ್ಮ್ಯಾನ್ ರಣಜಿ ಟೂರ್ನಿ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಮುಂಬೈ ತಂಡದೊಂದಿಗೆ ಅಭ್ಯಾಸ ನಡೆಸಲಿರುವ ರೋಹಿತ್ ಶರ್ಮಾ ರಣಜಿ ಟೂರ್ನಿಯ ಮೂಲಕ ಮತ್ತೆ ಫಾರ್ಮ್ ಕಂಡುಕೊಳ್ಳಲು ಮುಂದಾಗಬಹುದು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪ್ರತಿಯೊಬ್ಬರು ದೇಶೀಯ ಟೂರ್ನಿ ಆಡಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಯ ಕಂಡುಕೊಳ್ಳಲು ರೋಹಿತ್ ಶರ್ಮಾ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದ್ದು, ಈ ಸರಣಿಯ ಮೂಲಕ ಕೊಹ್ಲಿ ಮತ್ತು ರೋಹಿತ್ ವೈಟ್ ಬಾಲ್ ಕ್ರಿಕೆಟ್ಗೆ ಮರಳಲಿದ್ದಾರೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ