ಟಿ20 ವಿಶ್ವಕಪ್‌ಗೆ (T20 World Cup) ಟೀಂ ಇಂಡಿಯಾವನ್ನು ಪ್ರಕಟಿಸಿ ದಿನಗಳೆ ಕಳೆದಿವೆ. ಆದರೆ ದಿನದಿಂದ ದಿನಕ್ಕೆ ತಂಡದಲ್ಲಿ ಆ ಆಟಗಾರ ಇರಲೇಬೇಕಿತ್ತು ಎಂಬ ವಾದ ಹೆಚ್ಚುತ್ತಲೆ ಇದೆ. ಈಗ ಆ ವಾದಕ್ಕೆ ಅಪಶುಕನವೆಂಬಂತೆ ಆ ಆಟಗಾರನಿಗೆ ಕೊರೊನಾ ಬೇರೆ ವಕ್ಕರಿಸಿದೆ. ಹೀಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಆ ಆಟಗಾರನ ಹೆಸರಿಗೆ ಮತ್ತಷ್ಟು ಕುತ್ತು ಎದುರಾಗಿದೆ. ಅಷ್ಟಕ್ಕೂ ನಾವು ಟೀಂ ಇಂಡಿಯಾ ಅನುಭವಿ ವೇಗಿ ಶಮಿ (Mohammed Shami) ಬಗ್ಗೆ ಮಾತನಾಡುತ್ತಿದ್ದೇವೆ. ಟೀಂ ಇಂಡಿಯಾದಲ್ಲಿ ಅಪಾರ ಅನುಭವ ಹೊಂದಿರುವ ವೇಗಿ ಶಮಿಗೆ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಇದರಿಂದ ಆಯ್ಕೆ ಮಂಡಳಿ ಹಾಗೂ ನಾಯಕ ರೋಹಿತ್ (Rohit Sharma) ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಈಗ ಟೀಂ ಇಂಡಿಯಾ ನಾಯಕ ರೋಹಿತ್, ಶಮಿ ಆಯ್ಕೆಯ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ಬಹಿರಂಗಗೊಳಿಸಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಮಿ ಬಗ್ಗೆ ಮಾತನಾಡಿದ ರೋಹಿತ್, ಶಮಿ ಫಿಟ್ ಆಗಿದ್ದರೆ ಅವರು ತಂಡಕ್ಕೆ ಮರಳುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಶಮಿ ಮತ್ತು ಉಮೇಶ್‌ಗೆ ಅವಕಾಶ ಸಿಗಬಹುದು
ರೋಹಿತ್ ಶರ್ಮಾ ಪ್ರಸ್ತುತ ಮೊಹಾಲಿಯಲ್ಲಿದ್ದು, ಟೀಂ ಇಂಡಿಯಾ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಶಮಿ ಹಾಗೂ ಉಮೇಶ್ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಉತ್ತರಿಸಿದ ರೋಹಿತ್, ‘ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರು ಯಾವುದೇ ಮಾದರಿಯಲ್ಲಿ ಬೌಲಿಂಗ್ ಮಾಡಿದರೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಅವರು ಫಿಟ್ ಆಗಿದ್ದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ರೋಹಿತ್ ಹೇಳಿದ್ದಾರೆ.
ಶಮಿಗೆ ಕೊರೊನಾ ಸೋಂಕು
ಮೊಹಮ್ಮದ್ ಶಮಿ 2021 ರ T20 ವಿಶ್ವಕಪ್‌ನಲ್ಲಿ ಭಾರತದ ಪರ ತಮ್ಮ ಕೊನೆಯ T20 ಪಂದ್ಯವನ್ನು ಆಡಿದ್ದರು. ಸುಮಾರು ಒಂದು ವರ್ಷದ ನಂತರ, ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದಾಗ್ಯೂ, ಶಮಿಗೆ ನಿನ್ನೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಶ್ವಕಪ್ ಆರಂಭಕ್ಕೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಕೊರೊನಾದಿಂದ ಬಹುಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ 2022ರ ಟಿ20 ವಿಶ್ವಕಪ್‌ನಿಂದ ಶಮಿ ಹೊರಬೀಳುವ ಸಾಧ್ಯತೆಗಳು ತೀರ ಕಮ್ಮಿ. ಅಲ್ಲದೆ ರೋಹಿತ್ ಹೇಳಿಕೆ ಬಳಿಕ ಶಮಿ ವಿಶ್ವಕಪ್ ತಂಡಕ್ಕೆ ಆಗಮಿಸುವ ನಿರೀಕ್ಷೆ ಕೂಡ ಖಚಿತವಾಗಿದೆ.
ಆಸೀಸ್ ವಿರುದ್ಧ ಉಮೇಶ್ ಯಾದವ್ ಕಣಕ್ಕೆ
ಹಲವು ದಿನಗಳಿಂದ ಟೀಂ ಇಂಡಿಯಾದಿಂದ ದೂರವಿರುವ ಉಮೇಶ್ ಯಾದವ್, ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇಂಗ್ಲಿಷ್ ಕೌಂಟಿ ತಂಡ ಮಿಡ್ಲ್‌ಸೆಕ್ಸ್ ಪರ ಆಡುತ್ತಿದ್ದ ಉಮೇಶ್, ಗ್ಲೌಸೆಸ್ಟರ್‌ಶೈರ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ದೇಶಕ್ಕೆ ವಾಪಸ್ಸಾಗಿದ್ದರು. ಆ ಬಳಿಕ ಶಮಿ ಬದಲು ಉಮೇಶ್‌ಗೆ ಟೀಂ ಇಂಡಿಯಾದಿಂದ ಬುಲಾವ್ ಬಂತು. ಹೀಗಾಗಿ ಟೀಮ್ ಇಂಡಿಯಾ ಸೇರುವ ಉದ್ದೇಶದಿಂದ ಉಮೇಶ್ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸೀಸ್ ಪರ ಉಮೇಶ್ ಮಿಂಚಿದರೆ, ಅವರಿಗೆ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತವಾಗುವ ಎಲ್ಲಾ ಸಾಧ್ಯತೆಗಳು ಇವೆ.
Published On - 4:16 pm, Sun, 18 September 22